ಹಗರಿಬೊಮ್ಮನಹಳ್ಳಿ: ಬ್ರಿಟಿಷರು ಹಾಗೂ ಕಾಂಗ್ರೆಸ್ ನಾಯಕರಿಗೆ ನಮ್ಮ ದೇಶದ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ನಂಬಿಕೆ ಇಲ್ಲದ ಕಾರಣ ದೇಶ ವಿಭಜನೆಗೊಂಡಿತು ಎಂದು ಆರ್‌ಎಸ್‌ಎಸ್ ರಾಜ್ಯ ಪ್ರಾಂತ ಪ್ರಚಾರಕ ಶ್ರೀನಿವಾಸ ನಾಯಕ ಹೇಳಿದರು.
ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾರಣ್ಯ ಸಭಾಮಂಟಪದಲ್ಲಿ ಆಯೋಜಿಸಿದ್ದ ಆರ್‌ಎಸ್‌ಎಸ್ ಶತಾಬ್ದಿ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಬ್ರಿಟಿಷರು ಒಡೆದಾಳುವ ನೀತಿ ಅನುಸರಿಸಿ ನಮ್ಮ ದೇಶವನ್ನು ಎರಡು ಭಾಗ ಮಾಡಿದರು. ಆದರೆ, ಅದನ್ನು ಮೆಟ್ಟಿನಿಂತ ಭಾರತ ಇಂದು ವಿಶ್ವವೇ ತಿರುಗಿ ನೋಡುವಂತೆ ಬೆಳೆದು ನಿಂತಿದೆ. ಈ ಬೆಳವಣಿಗೆ ಸಹಿಸಲಾರದವರು ದೇಶದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘಟನೆ ದೇಶದ ಉಳಿವಿಗೆ ಶ್ರಮಿಸುತ್ತಿದೆ ಎಂದರು.
ದೂಪದಳ್ಳಿ ತಾಂಡಾದ ಶಿವಪ್ರಕಾಶ ಸ್ವಾಮೀಜಿ ಮಾತನಾಡಿ, ಆರ್‌ಎಸ್‌ಎಸ್ ಸಂಘಟನೆಯಲ್ಲಿ ಯುವಕರ ಕೊಡುಗೆ ಅಪಾರವಾಗಿದೆ ಎಂದರು. ವಿದ್ಯಾಕೇಂದ್ರದ ಕಾರ್ಯದರ್ಶಿ ಬಸವನಗೌಡ್ರು, ಸಂಘಟನೆ ಸಂಚಾಲಕರಾದ ದುರುಗಪ್ಪ, ರೊಟ್ಟಿ ಕೊಟ್ರಪ್ಪ, ಡಾ.ವಿನಯಸಿಂಹ, ಬೆಲಂಕೊಂಡ ರಮೇಶ, ಶ್ರೀಶೈಲ, ಶಾಸಕ ಕೆ.ನೇಮಿರಾಜ್‌ನಾಯ್ಕ, ಪುರಸಭೆ ಸದಸ್ಯರಾದ ಜೋಗಿ ಹನುಮಂತಪ್ಪ, ದೀಪಕ್ ಸಾ ಕಠಾರೆ, ಬಿಜೆಪಿ ಮಂಡಲ ಅಧ್ಯಕ್ಷ ಬೆಣ್ಣೆಕಲ್ಲು ಕೆ.ಎಸ್.ಪ್ರಕಾಶ್, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಕಿಚಡಿ ಕೊಟ್ರೇಶ್, ಟಿ.ಮಹೇಂದ್ರ, ವರ್ತಕರ ಸಂಘದ ಬದಾಮಿ ಮೃತ್ಯುಂಜಯ, ಜಿ.ಮಂಜುನಾಥ, ಅಕ್ಕಿ ಶಿವಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.