ಜಿಲ್ಲೆ

ಶಿವಯೋಗ ಮಂದಿರ ಶಾಖಾ ಮಠದ ಕಾರ್ಯ ಶ್ಲಾಘನೀಯ

ನರೇಗಲ್ಲ: ಮಠ-ಮಾನ್ಯಗಳಿಗೆ ಒಬ್ಬ ಕ್ರಿಯಾಶೀಲ ಮಠಾಧಿಪತಿ ಇದ್ದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿಗಳೇ ಪ್ರತ್ಯಕ್ಷ ಉದಾಹರಣೆಯಾಗಿದ್ದಾರೆ. ಅವರ ಸಂಕಲ್ಪದಿಂದಲೆ ಇಂದು ನಿಡಗುಂದಿಕೊಪ್ಪದ ಶ್ರೀಮಠದಲ್ಲಿ ಗಜೇಂದ್ರಗಡ ತಾಲೂಕಿನ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂದು ಶಾಸಕ ಜಿ. ಎಸ್. ಪಾಟೀಲ ಹೇಳಿದರು.

ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಗಜೇಂದ್ರಗಡ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಶ್ರೀ ಮಠದ ಜಾತ್ರೆಯೊಂದಿಗೆ ಕನ್ನಡ ನುಡಿ ಸೇವೆಯನ್ನು ತಾಲೂಕು ಸಮ್ಮೇಳನದ ರೂಪದಲ್ಲಿ ಏರ್ಪಡಿಸಿರುವುದು ಶ್ಲಾಘನೀಯ ಕಾರ್ಯ. ಅದಕ್ಕಾಗಿ ಅಭಿನವ ಚನ್ನಬಸವ ಸ್ವಾಮೀಜಿ, ನಿಡಗುಂದಿ ಮತ್ತು ನಿಡಗುಂದಿಕೊಪ್ಪದ ಸರ್ವ ಸದ್ಭಕ್ತರನ್ನು, ಕನ್ನಡಾಭಿಮಾನಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇನೆ ಎಂದರು.

ಸಾನ್ನಿಧ್ಯ ವಹಿಸಿದ್ದ ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ತಾಲೂಕಾಧ್ಯಕ್ಷ ಅಮರೇಶ ಗಾಣಿಗೇರ ಕನ್ನಡ ಧ್ವಜಾರೋಹಣ ನೆರವೇರಿಸಿದರು. ನಾಡಿನ ಅನೇಕ ಹರ-ಗುರು-ಚರ ಮೂರ್ತಿಗಳು, ಹೋಬಳಿ ಘಟಕದ ಅಧ್ಯಕ್ಷ ಎಂ.ವಿ. ವೀರಾಪೂರ, ಮಿಥುನ ಪಾಟೀಲ, ವಿ.ಬಿ. ಸೋಮನಕಟ್ಟಿಮಠ, ಅಂದಪ್ಪ ಬಿಚ್ಚೂರ, ಫಕೀರಪ್ಪ ಕುಕನೂರ, ಜಗದೀಶ ಕರಡಿ ಸೇರಿ ನಿಡಗುಂದಿಕೊಪ್ಪ, ನಿಡಗುಂದಿ, ಹಾಲಕೆರೆ, ನರೇಗಲ್ಲ ಮತ್ತು ತಾಲೂಕಿನ ಎಲ್ಲ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.