ಮೈಸೂರು: ಬಸವ ಪೀಠ ಸೀಮಿತವಾಗದೆ ವಿಶ್ವವಿದ್ಯಾನಿಲಯದ ಹೊರಗೆ ಸರಣಿ ಉಪನ್ಯಾಸ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಅಧ್ಯಯನ ಹಾಗೂ ವಿಸ್ತರಣಾ ಕೇಂದ್ರದಿಂದ ಆಯೋಜಿಸಿರುವ ಸರಣಿ ಉಪನ್ಯಾಸ ಮಾಲಿಕೆ ಹಾಗೂ ‘ಮಹಾಮನೆ’ ಸಭಾಂಗಣವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಯನ ಪೀಠಗಳು ತಮ್ಮ ವಿಭಾಗ, ಮಾನಸಗಂಗೋತ್ರಿಗೆ ಮಾತ್ರ ಸೀಮಿತಗೊಳ್ಳುತ್ತಿವೆ. ಇದರ ಮಧ್ಯೆ ಬಸವೇಶ್ವರ ಪೀಠ ಗಂಗೋತ್ರಿ ಹೊರಗೂ ಸರಣಿ ಉಪನ್ಯಾಸಗಳನ್ನು ಆಯೋಜಿಸುವ ಮೂಲಕ ಬಸವ ತತ್ತ್ವ ಪ್ರಸರಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಗೋಡೆಗಳು ನಿರ್ಮಾಣಗೊಂಡಿವೆ: ಗಂಗೋತ್ರಿಯ ಆವರಣದಲ್ಲಿ ಇರುವ ವಿಭಾಗಗಳ ನಡುವೆಯೇ ಸಮನ್ವಯ ಕಡಿಮೆ ಆಗುತ್ತಿದೆ. ಅಲ್ಲಿಯವರು ಇಲ್ಲಿ ಬರಬಾರದು, ಇಲ್ಲಿಯವರು ಅಲ್ಲಿ ಹೋಗಬಾರದು ಎನ್ನುವ ಮನೋಭಾವ ತಳೆದು ಒಂದೊಂದು ವಿಭಾಗಗಳ ನಡುವೆ ಗೋಡೆಗಳು ನಿರ್ಮಾಣಗೊಂಡಿವೆ ಎಂದು ಲೋಕನಾಥ್ ಬೇಸರ ವ್ಯಕ್ತಪಡಿಸಿದರು.
ಪಕ್ಕದ ವಿಭಾಗದವರು ಬರದಂತೆ ಬೇಲಿ ಹಾಕಲಾಗುತ್ತಿದೆ. ವಿವಿ ಯಾರ ಆಸ್ತಿಯೂ ಅಲ್ಲ. ಎಲ್ಲರೂ ನಿವೃತ್ತರಾಗಿ ಹೋಗಬೇಕು. ಆದರೆ ಎಲ್ಲರೊಂದಿಗೆ ಸ್ನೇಹಭಾವ, ಸಹಬಾಳ್ವೆ ಇರಬೇಕು. ಆದರೆ ಈ ಬೆಳವಣಿಗೆಗಳು ಬೇಸರಕರ. ಪ್ರಾಧ್ಯಾಪಕರೇ ಗಲಾಟೆ ಮಾಡಿದರೆ ವಿದ್ಯಾರ್ಥಿಗಳಿಗೆ ವೈಚಾರಿಕತೆ ಕೊಡಲಾಗುತ್ತದೆಯೇ ಎಂದು ಅವರು ಪ್ರಶ್ನಿಸಿದರು.
ಒಗ್ಗಟ್ಟಿನಿಂದ ಕೆಲಸ ಮಾಡೋಣ: ಯಾವುದೇ ಬೇಲಿ ಇಲ್ಲದೇ ಎಲ್ಲರೂ ಒಗ್ಗಟ್ಟಿನಿಂದ ಬಸವ ತತ್ತ್ವದಡಿ ಕೆಲಸ ಮಾಡಬೇಕು. ಮನುಷ್ಯ ಸಂಬಂಧಗಳು ಕಡಿಮೆ ಅಗುತ್ತಿರುವ ದಿನಗಳಲ್ಲಿ ಮಾನವೀಯತೆ, ಭವಿಷ್ಯದ ವಿದ್ಯಾರ್ಥಿಗಳನ್ನು ನಿರ್ಮಿಸುವ ಕಾರ್ಯ ನಮ್ಮಿಂದ ಅಗಬೇಕು. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ನಡೆಸಬೇಕು ಎಂದು ಪ್ರೊ. ಲೋಕನಾಥ್ ಹೇಳಿದರು.
ಮೈಸೂರು ವಿವಿಯಲ್ಲಿ 6 ಸಾವಿರ ವಿದ್ಯಾರ್ಥಿಗಳಿದ್ದರೂ ಗ್ರಂಥಾಲಯಕ್ಕೆ ನೂರು ವಿದ್ಯಾರ್ಥಿಗಳು ಭೇಟಿ ನೀಡುವುದಿಲ್ಲ. ಅಧ್ಯಯನವೇ ಇಲ್ಲವಾಗಿದೆ. ಅಧ್ಯಯನ ಇಲ್ಲದಿದ್ದರೆ ಜ್ಞಾನವೃದ್ಧಿಯಾದರೂ ಹೇಗಾಗುತ್ತದೆ. ಇಂದಿನ ಯುವ ಜನಾಂಗ ಪರಿಪೂರ್ಣ ವಿಷಯ ನೀಡದೆ ಬಹುತೇಕ ಸುಳ್ಳುಗಳಿಂದಲೇ ತುಂಬಿರುವ ಮೊಬೈಲ್‌ನಲ್ಲಿ ತಲ್ಲೀನರಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ವೇದ ಶಾಸ್ತ್ರ ಪುರಾಣ ಆಗಮ ಕುರಿತ ಶರಣರ ಚಿಂತನೆಗಳ ಕುರಿತು ಸಂಸ್ಕೃತಿ ಚಿಂತಕ ರಂಜಾನ್ ದರ್ಗಾ ಮಾತನಾಡಿ, ಬಸವ ಧರ್ಮ ಒಂದು ಜಾತಿಗೆ ಧರ್ಮಕ್ಕೆ ಸೀಮಿತವಾಗಿಲ್ಲ. ಬಸವ ಧರ್ಮ ಸಂಸಾರ ಧರ್ಮ. ಸಕಲ ಜೀವಾತ್ಮರಿಗೆ ಸೇರಿದ್ದು. ಇಂದು ದ್ವೇಷ ಸಂಸ್ಕೃತಿ ಬೆಳೆದಿದೆ. ಒಂದರ್ಥದಲ್ಲಿ ಎಲ್ಲ ಜಾತಿಯ ಜನರಲ್ಲಿ ಮನುವಾದಿ ಇದ್ದಾನೆ. ಸಿಖ್, ಮುಸ್ಲಿಂ, ಕ್ರೈಸ್ತ ಎಲ್ಲರೊಳಗೂ ಜಾತಿವಾದಿ ಇದ್ದಾನೆ ಎಂದು ಅವರು ವಿಷಾದಿಸಿದರು.
ಸತ್ಯದ ಪಥದ ಕಡೆಗೆ ನಡೆಯುವ ಸಂದೇಶ: ಬಸವ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಅರವಿಂದ ಮಾಲಗತ್ತಿ ಮಾತನಾಡಿ, ಮರ್ತ್ಯಲೋಕವನ್ನು ಬಸವಣ್ಣ ಭಕ್ತಿ ಲೋಕವನ್ನಾಗಿ ಪರಿವರ್ತಿಸಿದ. ಸತ್ಯದ ಪಥದ ಕಡೆಗೆ ನಡೆಯುವುದೇ ಬಸವ ತತ್ವದ ಸಾರವಾಗಿದೆ. ಎಲ್ಲ ಜಾತಿ, ವರ್ಗಗಳ ಜನರು ಸೇರಿದ್ದರಿಂದ ಕಲ್ಯಾಣದಲ್ಲಿ ಮಹಾಮನೆ ನಿರ್ಮಾಣವಾಯಿತು ಎಂದು ತಿಳಿಸಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ, ಕಾರ್ಯಕ್ರಮ ಸಂಯೋಜಕ ಡಾ.ಮೈಲಹಳ್ಳಿ ರೇವಣ್ಣ ಇದ್ದರು.