ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಜೈನ ಮಠದಲ್ಲಿ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾ ಸಮ್ಮೇಳದ ಲಾಂಛನ ಹಾಗೂ ಆಹ್ವಾನ ಪತ್ರಿಕೆಯನ್ನು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಬಿಡುಗಡೆಗೊಳಿಸಿದರು. 
ಜಿಲ್ಲೆ

ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ

ಅಭಿನಯ್ ಎಚ್.ಎಂ

ಶ್ರವಣಬೆಳಗೊಳ: ಪತ್ರಿಕಾ ವಿತರಕರು ಸೂರ್ಯ ಉದಯಿಸುವ ಮುನ್ನವೇ ಶ್ರಮವಹಿಸಿ ದುಡಿಯುವ ಕಾಯಕ ಯೋಗಿಗಳಾಗಿದ್ದು, ಅವರು ಸೂರ್ಯವಂಶದವರು ಎಂದು ಶ್ರೀ ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪತ್ರಿಕಾ ವಿತರಕರ ಒಕ್ಕೂಟದಿಂದ ಆಯೋಜಿಸಿರುವ ಜಿಲ್ಲಾ ಸಮ್ಮೇಳದ ಲಾಂಛನ ಹಾಗೂ ಆಹ್ವಾನ ಪತ್ರಿಕೆಗಳನ್ನು ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಜೈನ ಮಠದಲ್ಲಿ ಗುರುವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸೂರ್ಯ ಹುಟ್ಟುವ ಸಮಯದಲ್ಲೇ ಪತ್ರಿಕಾ ವಿತರಕರ ಕೆಲಸ ಪ್ರಾರಂಭಗೊಳ್ಳುತ್ತದೆ. ಸೂರ್ಯ ಹೇಗೆ ನಿತ್ಯ ಬೆಳಕನ್ನು ನೀಡುತ್ತಾನೋ ಹಾಗೆಯೇ ಪ್ರತಿ ದಿನದ ವಿಚಾರಗಳನ್ನು ಪತ್ರಿಕಾ ವಿತರಕರು ಜನರಿಗೆ ಮುಂಜಾನೆಯೇ ತಲುಪಿಸುತ್ತಾರೆ ಎಂದರು.

ಪ್ರಪಂಚ ಎಷ್ಟೇ ಮುಂದುವರಿದರೂ ಜಾಲತಾಣ, ಟಿವಿ, ಯೂ ಟೂಬ್... ಹೀಗೆ ಅನೇಕ ತಂತ್ರಜ್ಞಾನ ಬೆಳೆದರೂ ನಿತ್ಯ ಜನರು ಕಾಫಿಯೊಂದಿಗೆ ಪತ್ರಿಕೆಗಳನ್ನು ಓದುತ್ತಾರೆ. ಚಳಿ, ಮಳೆ, ಗಾಳಿ ಲೆಕ್ಕಿಸದೆ ಮುಂಜಾನೆಯೇ ಮನೆ ಮನೆಗೆ ಸೈಕಲ್‌ನಲ್ಲಿ ಪತ್ರಿಕೆ ಹಾಕುವ ವಿತರಕರು ಜಿಲ್ಲೆಯಲ್ಲಿ ಒಟ್ಟುಗೂಡಿ ಕುಟುಂಬದವರ ಜತೆ ಒಂದು ದಿನ ಸಮ್ಮೇಳನದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.

ಈ ಹಿಂದೆ ಪೀಠಾಧ್ಯಕ್ಷರಾಗಿದ್ದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅವರು ಪತ್ರಕರ್ತರ ಸಮ್ಮೇಳನ, ವಿದ್ವತ್ ಸಮ್ಮೇಳನ, ಯುವ ಸಮ್ಮೇಳನ ಹಾಗೂ ಮಹಿಳಾ ಸಮ್ಮೇಳನಗಳನ್ನು ನಡೆಸುವ ಮೂಲಕ ರಾಜ್ಯದಲ್ಲೇ ಮಾದರಿಯಾಗಿದ್ದರು. ಪತ್ರಿಕಾ ವಿತರಕರು ಹಾಗೂ ಪತ್ರಕರ್ತರನ್ನು ಹೆಚ್ಚು ಗೌರವಿಸುತ್ತಿದ್ದ ಸಂತ ಯಾರಾದರೂ ಇದ್ದರೆ ಅದು ನಮ್ಮ ಚಾರುಶ್ರೀಗಳು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ಮಾತನಾಡಿ, ಮಾ.2ರಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದಿಂದ ಪ್ರಥಮ ಬಾರಿಗೆ ಜಿಲ್ಲಾ ಸಮ್ಮೇಳನ ನಡೆಯುತ್ತಿರುವುದು ಸಂತೋಷದ ವಿಚಾರ. ಅದರಲ್ಲೂ ವಿತರಕರ ಸಂಘದ ಅಧ್ಯಕ್ಷ ಕೆ.ಶಂಭುಲಿಂಗ ಅವರು ನಮ್ಮ ತಾಲೂಕನ್ನು ಆಯ್ಕೆ ಮಾಡಿ ಶಾಸಕರ ಮೇಲೆ ಭರವಸೆ ಇಟ್ಟು ಈ ಸಮ್ಮೇಳನವನ್ನು ಚನ್ನರಾಯಪಟ್ಟಣದಲ್ಲಿ ನಡೆಸಲು ಇಚ್ಛಿಸಿರುವುದು ಸಂತೋಷದ ಸಂಗತಿ. ಶ್ರೀಗಳ ಆಶೀರ್ವಾದದಿಂದ ಲಾಂಛನ ಬಿಡುಗಡೆಯಾಗಿದ್ದು, ಇದರಲ್ಲಿ ಜಿಲ್ಲೆಯ ಐತಿಹಾಸಿಕ ಸ್ಥಳಗಳಾದ ಶ್ರವಣಬೆಳಗೊಳದ ಬಾಹುಬಲಿ ಮೂರ್ತಿ, ಬೇಲೂರು-ಹಳೆಬೀಡು, ಗೊರೂರು ಜಲಾಶಯ, ತೆಂಗು ಹಾಗೂ ಕೆಎಂಎಫ್ ಘಟಕ ಗಮನ ಸೆಳೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷ ಕಿರಣ್, ತಾಲೂಕು ವಿತರಕರ ಒಕ್ಕೂಟದ ಕಾರ್ಯದರ್ಶಿ ಎ.ಎಂ.ಜಯರಾಂ, ಪತ್ರಕರ್ತ ನಂದನ್‌ಪುಟ್ಟಣ್ಣ, ನಾಗೇಂದ್ರ ರಾ.ಯ, ಐ.ಕೆ.ಮಂಜುನಾಥ್, ಹೊಳೇನರಸೀಪುರ ತಾಲೂಕು ಅಧ್ಯಕ್ಷ ಮೋಹನ್‌ಕುಮಾರ್, ಕಾರ್ಯದರ್ಶಿ ಬಿ.ಸುರೇಶ್, ವಿತರಕರಾದ ಕೃಷ್ಣಪ್ರಸಾದ್, ಸಿ.ವಿ.ಮಂಜುನಾಥ್, ಸಿ.ಎಸ್.ವೆಂಕಟೇಶ್, ಚಂದ್ರಶೇಖರ್, ದಿನೇಶ್, ರಂಗನಾಥ್, ವಿಶ್ವಾಸ್ ಮತ್ತಿತರರಿದ್ದರು.