ಮಳವಳ್ಳಿ: ತಾಲೂಕಿನ ನೆಲಮಾಕನಹಳ್ಳಿ ಸಮೀಪದ ಮದ್ದೂರು- ಮಳವಳ್ಳಿ ಮುಖ್ಯರಸ್ತೆಯಲ್ಲಿ ಮಂಗಳವಾರ ಸಂಜೆ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಂತಿದ್ದ ಇಬ್ಬರು ಮಹಿಳೆಯರಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ.
ನೆಲಮಾಕನಹಳ್ಳಿ ಗ್ರಾಮದ ರಶ್ಮಿ(36), ಗೀತಾ(38) ಗಾಯಾಳುಗಳು. ಬಾನಸಮುದ್ರ ಬಳಿ ಇರುವ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಇವರು, ಕೆಲಸ ಮುಗಿಸಿ ಆಟೋದಲ್ಲಿ ಬಂದು ಕೆಳಗೆ ಇಳಿದು ರಸ್ತೆ ದಾಟಲು ನಿಂತಿದ್ದರು. ಈ ಸಮಯದಲ್ಲೇ ಮದ್ದೂರು ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರಿಗೆ ಅಡ್ಡಲಾಗಿ ನಾಯಿ ಬಂದಿದೆ. ಇದನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದಾಗ ನಿಯಂತ್ರಣ ಕಳೆದುಕೊಂಡು ಕಾರು ಪಲ್ಟಿ ಹೊಡೆದು ರಸ್ತೆ ಬದಿಯಲ್ಲಿ ನಿಂತಿದ್ದ ರಶ್ಮಿ ಹಾಗೂ ಗೀತಾ ಅವರ ಮೇಲೆ ಉರುಳಿ ಬಿದ್ದಿದೆ. ಗಾಯಾಳುಗಳಿಗೆ ಸ್ಥಳೀಯರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಅವಘಡದಲ್ಲಿ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.