ಜಿಲ್ಲೆ

ಪತಿಯನ್ನೇ ಕೊಲೆ ಮಾಡಿಸಿದಳು, ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುವ ಕಾರಣಕ್ಕೆ ಕೃತ್ಯ, ಎರಡು ಮಕ್ಕಳ ತಾಯಿ

ಆನೇಕಲ್: ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಮಕ್ಕಳೊಂದಿಗೆ ಸಂಸಾರವೂ ಸಾಗುತ್ತಿತ್ತು. ಆದರೆ, ಲಾಕ್‌ಡೌನ್ ಸಂದರ್ಭದಲ್ಲಿ ಗಂಡನ ಮನೆಗೆ ಹೋಗಿದ್ದಾಗ, ಅಲ್ಲಿ ಮತ್ತೊಬ್ಬನೊಂದಿಗೆ ಆಕೆಗೆ ಅಕ್ರಮ ಸಂಬಂಧ ಏರ್ಪಟ್ಟಿತ್ತು. ಆತನೊಂದಿಗೆ ಸೇರಿ ಗಂಡನನ್ನೇ ಕೊಲ್ಲಿಸಿದ ಮಹಿಳೆ ಈಗ ಜೈಲು ಪಾಲಾಗಿದ್ದಾಳೆ.

ಹಾರಗದ್ದೆ ನಿವಾಸಿ ಮಾದೇಶ (35) ಕೊಲೆಯಾದವ. ಪ್ರೇಮಾ (28), ತಮಿಳುನಾಡಿನ ಡೆಂಕಣಿಕೋಟೆ ನಿವಾಸಿಗಳಾದ ಕರಿಯ (26) ಮತ್ತು ಮಲ್ಲೇಶ್ (26) ಬಂಧಿತರು.

ತಮಿಳುನಾಡಿನ ಡೆಂಕಣಿಕೋಟೆಯ ಮಾದೇಶ ಮತ್ತು ಪ್ರೇಮಾ ಪ್ರೀತಿಸಿ ಮದುವೆಯಾಗಿದ್ದರು. ಟೇಲರಿಂಗ್ ಕೆಲಸ ಮಾಡುತ್ತಿದ್ದ ಮಾದೇಶ ಜಿಗಣಿ ಬಳಿ ಹಾರಗದ್ದೆಯಲ್ಲಿ ಟೇಲರಿಂಗ್ ಅಂಗಡಿ ಇಟ್ಟು, ಅಲ್ಲಿಯೇ ವಾಸವಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.

ಗಾರ್ಮೆಂಟ್ಸ್‌ನಲ್ಲಿ ಪರಿಚಯ: ಜಿಗಣಿಯ ಶ್ರೀರಾಮಪುರದಲ್ಲಿದ್ದ ಗಾರ್ಮೆಂಟ್ಸ್‌ನಲ್ಲಿ ಪ್ರೇಮಾ ಕೆಲಸ ಮಾಡುತ್ತಿದ್ದಳು. ಅಲ್ಲಿಯೇ ಕರಿಯ ಕೂಡ ಕೆಲಸ ಮಾಡುತ್ತಿದ್ದು, ಈ ವೇಳೆ ಪರಿಚಯ ಸಂಬಂಧಕ್ಕೆ ತಿರುಗಿತ್ತು.

ಲಾಕ್‌ಡೌನ್ ಸಮಯದಲ್ಲಿ ಕೆಲಸ ಇಲ್ಲದಂತಾದಾಗ ಕರಿಯನ ಜತೆಗೆ ಪ್ರೇಮಾ ಮತ್ತಷ್ಟು ಹತ್ತಿರವಾಗಿದ್ದಳು. ಅಲ್ಲದೆ, ಲಾಕ್‌ಡೌನ್ ಮುಗಿದ ಬಳಿಕ ಕಂಪನಿ ಕಾರ್ಯಾರಂಭಿಸಿದಾಗ ಅವರಿಬ್ಬರೂ ಒಟ್ಟಾಗಿ ಡೆಂಕಣಿಕೋಟೆಯಿಂದ ಕೆಲಸಕ್ಕೆ ಬಂದು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಅವರಿಬ್ಬರ ನಡುವಿನ ಸಂಬಂಧ ಮತ್ತಷ್ಟು ಗಾಢವಾಗಿತ್ತು. ಅಲ್ಲದೆ, ಇಬ್ಬರೂ ಮದುವೆಯಾಗಿ ಪ್ರತ್ಯೇಕವಾಗಿ ಸಂಸಾರ ಹೂಡಲು ನಿರ್ಧರಿಸಿದ್ದರು.

ಈ ನಿರ್ಧಾರಕ್ಕೆ ಅಡ್ಡಿಯಾಗಿದ್ದ ಮಾದೇಶನನ್ನು ಕೊಲ್ಲಬೇಕು ಎಂದು ಪ್ರೇಮಾ ಸಂಚು ರೂಪಿಸಿದ್ದಳು. ಆದರೆ 20 ದಿನಗಳ ಹಿಂದೆ ಮಾದೇಶ ಪತ್ನಿಯನ್ನು ಹಾರಗದ್ದೆಗೆ ಕರೆಸಿಕೊಂಡಿದ್ದ. ಈ ಅವಕಾಶ ಬಳಸಿಕೊಂಡು ಪ್ರೇಮಾ ತನ್ನ ಪತಿಯನ್ನು ಕೊಲ್ಲುವಂತೆ ಕರಿಯನನ್ನು ಪುಸಲಾಯಿಸಿದ್ದಳು.

ಅ.17ರ ರಾತ್ರಿ ಮಾದೇಶ ಒಬ್ಬನೇ ಹಾರಗದ್ದೆ ರಸ್ತೆಯಲ್ಲಿ ಮನೆಗೆ ಮರಳುತ್ತಿದ್ದ. ಈ ಬಗ್ಗೆ ಪ್ರೇಮಾಳಿಂದ ಮಾಹಿತಿ ಪಡೆದಿದ್ದ ಕರಿಯ ಮತ್ತು ಮಲ್ಲೇಶ್ ಆತನನ್ನು ಹಿಂಬಾಲಿಸಿ, ಕೊಲೆ ಮಾಡಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಜಿಗಣಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಎಸ್‌ಪಿ ರವಿ ಡಿ. ಚನ್ನಣ್ಣನವರ್, ಮಾದೇಶನ ಕೊಲೆಯ ಹಿಂದೆ ಅಕ್ರಮ ಸಂಬಂಧ ಇರುವುದು ಗೊತ್ತಾಗಿತ್ತು. ಆ ಜಾಡಿನಲ್ಲೇ ತನಿಖೆ ಮಾಡಿದಾಗ ಆತನ ಪತ್ನಿ ಪ್ರೇಮಾ, ಆಕೆಯ ಪ್ರಿಯತಮ ಕರಿಯ ಹಾಗೂ ಆತನ ಸ್ನೇಹಿತ ಮಲ್ಲೇಶ್ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಖಚಿತಪಟ್ಟಿದ್ದರಿಂದ ಬಂಧಿಸಲಾಯಿತು ಎಂದು ಹೇಳಿದರು.