ಜಿಲ್ಲೆ

ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತ್ಯು

Avinash R

ಸುಳ್ಯ: ನಗರದ ಕೊಡಿಯಾಲ ಗ್ರಾಮದ ಕಲ್ಲರ್ಪೆ ಎಂಬಲ್ಲಿ ಮಲಗಿದಲ್ಲಿಗೆ ಹೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಜಯಭಾರತಿ (56) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅ.12ರಂದು ರಾತ್ರಿ ಮನೆಯಲ್ಲಿ ಮಲಗಿದ್ದ ಜಯಭಾರತಿ ಮೇಲೆ ಅವರ ಪತಿಯ ಅಣ್ಣ ಶಂಕರ ನಾಯಕ್ ಎಂಬಾತ ಕಿಟಕಿ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಎನ್ನಲಾಗಿದೆ. ಘಟನೆಯಲ್ಲಿ ಇಬ್ಬರೂ ಗಾಯಗೊಂಡಿದ್ದರು. ಶೇ.80 ರಷ್ಟು ಗಾಯಗೊಂಡಿದ್ದ ಮಹಿಳೆಯನ್ನು ಸುಳ್ಯದ ಆಸ್ಪತ್ರೆಗೆ ತಂದು ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಜಯಭಾರತಿ ಪತಿ ಜನಾರ್ದನ ನಾಯಕ್ ಒಂದೂವರೆ ವರ್ಷದ ಹಿಂದೆ ನಿಧನರಾಗಿದ್ದರು. ಜಯಭಾರತಿ ಮತ್ತು ಅವರ ಪುತ್ರ ಹಾಗೂ ಆರೋಪಿ ಶಂಕರ ನಾಯಕ್ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಜಯಭಾರತಿಯವರ ಪುತ್ರ ಇತ್ತೀಚೆಗಷ್ಟೇ ವಿದೇಶಕ್ಕೆ ಹೋದ ಕಾರಣ ಮನೆಯಲ್ಲಿ ಜಯಭಾರತಿ ಮತ್ತು ಆರೋಪಿ ಶಂಕರ ನಾಯಕ್ ಮಾತ್ರ ಇದ್ದರು. ಲಕ್ವಾದಿಂದಾಗಿ ಒಂದು ಕೈ ಮತ್ತು ಒಂದು ಕಾಲು ದುರ್ಬಲವಾಗಿದ್ದ ಶಂಕರ ನಾಯಕ್‌ಗೆ ಊಟ, ಮದ್ದು ಜಯಭಾರತಿ ಕೊಡುತ್ತಿದ್ದರೂ ಆತ ಜಯಭಾರತಿಯನ್ನು ಯಾವಾಗಲೂ ದ್ವೇಷಿಸುತ್ತಿದ್ದ. ಆರೋಪಿ ಶಂಕರ್ ನಾಯಕ್‌ನನ್ನು ಪೊಲೀಸರು ಬಂಧಿಸಿದ್ದಾರೆ.