ಜಿಲ್ಲೆ

ಗ್ರಾಪಂ ಅಭ್ಯರ್ಥಿಗಳಲ್ಲಿ ಗೆಲುವಿನ ಲೆಕ್ಕಾಚಾರ ಜೋರು

ಹಾವೇರಿ: ಗ್ರಾಪಂಗಳಿಗೆ ಮೊದಲ ಹಂತದಲ್ಲಿ ಮಂಗಳವಾರ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಸದ್ಯ ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿದೆ.

ಒಟ್ಟು ಎಷ್ಟು ಮತಗಳು ಚಲಾವಣೆಯಾದವು, ಇದರಲ್ಲಿ ತಮಗೆಷ್ಟು ಮತಗಳು ಬಿದ್ದಿರಬಹುದು, ಈ ಕುಟುಂಬದವರಿಂದ ಇಷ್ಟು ಮತಗಳು ನಮಗೆ ಬಂದಿರಬಹುದು ಎಂಬ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿ ಪರ ಏಜೆಂಟರು ಮುಳುಗಿದ್ದಾರೆ.

ಕೆಲವು ಗ್ರಾಮಗಳಲ್ಲಿ ತಕರಾರು: ಮೀಸಲಾತಿಯಡಿ ಸ್ಪರ್ಧಿಸಿ ಸೋತ ಅಭ್ಯರ್ಥಿ ಸಾಮಾನ್ಯ ವರ್ಗದಲ್ಲೂ ಗೆಲುವಿಗೆ ಪೈಪೋಟಿ ನೀಡುವ ಅವಕಾಶ ಈ ಚುನಾವಣೆಯ ಮತ ಎಣಿಕೆಯಲ್ಲಿದೆ. ಹೀಗಾಗಿ, ಇದನ್ನು ಅರಿತವರು ಬಹುತೇಕ ಕಡೆ ಒಂದೇ ಮತ ಚಲಾಯಿಸುವ ಪ್ರಯೋಗ ನಡೆಸಿದ್ದರು. ಈ ವಿಷಯ ಬುಧವಾರ ಬಹಿರಂಗಗೊಂಡು ಅವರ ಜೊತೆಗಿದ್ದವರು, ‘ನೀವು ನಮಗೆ ಮೋಸ ಮಾಡೀರಿ’ ಎಂದು ತಕರಾರು ತೆಗೆದಿರುವ ಮಾಹಿತಿಗಳು ಕೆಲವು ಗ್ರಾಮಗಳಿಂದ ದೊರೆತಿದೆ.

ಭಾರಿ ತುರುಸಿನಿಂದ ಕೂಡಿರುವ ಹಳ್ಳಿ ಫೈಟ್​ನಲ್ಲಿ ಯಾರು ಗೆಲುವಿನ ದಡ ಸೇರುತ್ತಾರೋ ಎಂಬುದನ್ನು ತಿಳಿಯಲು ಡಿ. 30ರಂದು ನಡೆಯುವ ಮತದಾನದವರೆಗೆ ಕಾಯಬೇಕಿದೆ.

ದೂರದೂರಿನಿಂದ ಬಂದವರು ವಾಪಸ್: ಗ್ರಾಪಂ ಚುನಾವಣೆ ಮತದಾನಕ್ಕೆಂದು ದೂರದೂರಿನಿಂದ ಸ್ವಗ್ರಾಮಕ್ಕೆ ಬಂದಿದ್ದ ಬಹುತೇಕರು ತಮ್ಮನ್ನು ಕರೆಯಿಸಿದ ಅಭ್ಯರ್ಥಿಗಳಿಗೆ ಶುಭ ಕೋರಿ ಬುಧವಾರ ಬೆಳಗ್ಗೆ ತಾವು ಕೆಲಸ ಮಾಡುವ ಊರುಗಳಿಗೆ ಮರಳಿದರು.

ರಿಲ್ಯಾಕ್ಸ್ ಮೂಡ್​ನಲ್ಲಿ ಸ್ಪರ್ಧಾಳುಗಳು: ಚುನಾವಣೆಗೆ ಸ್ಪರ್ಧಿಸಿದ್ದ ಮರುದಿನದಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ಹಗಲಿರುಳು ವಾರ್ಡ್​ನ ಮನೆ-ಮನೆಗೆ ತೆರಳಿ ಮತಯಾಚನೆಯಲ್ಲಿ ತೊಡಗಿದ್ದ ಅಭ್ಯರ್ಥಿಗಳು ಈಗ ರಿಲ್ಯಾಕ್ಸ್ ಮೂಡ್​ಗೆ ಮರಳಿದ್ದಾರೆ. ಅನೇಕರು ತಮ್ಮ ಮೊಬೈಲ್​ಫೋನ್ ಬಂದ್ ಮಾಡಿಕೊಂಡು ಮನೆಯಲ್ಲೇ ವಿಶ್ರಾಂತಿ ಪಡೆದರು. ಕೆಲವರು ದೇವಸ್ಥಾನಗಳಿಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿದರು. ಮತ್ತೆ ಕೆಲವರು ಚುನಾವಣೆಯಲ್ಲಿ ತಮ್ಮ ಪರವಾಗಿ ಹಗಲಿರುಳು ಕೆಲಸ ಮಾಡಿದ ಹತ್ತಾರು ಜನರ ಪಡೆಯನ್ನು ಕಟ್ಟಿಕೊಂಡು ಗೋವಾದತ್ತ ಟ್ರಿಪ್ ಬೆಳೆಸಿದ್ದಾರೆ.