ಬೆಂಗಳೂರು: ನಗರದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಬಹು ನಿರೀಕ್ಷಿತ ವೈಟ್ ಟಾಪಿಂಗ್ ಯೋಜನೆಗೆ ಅಂತೂ ಮುಹೂರ್ತ ಕೂಡಿಬಂದಿದ್ದು, ಸೋಮವಾರ (ಜು.15) ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇತ್ತೀಚಿಗಷ್ಟೇ ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಿ ನಗರದ 150 ಕಿ.ಮೀ. ಉದ್ದ ರಸ್ತೆಗಳನ್ನು 1,700 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಸಿದ್ಧತೆ ಕೈಗೊಳ್ಳಲಾಗಿತ್ತು. ಇದರ ಭಾಗವಾಗಿ ಮೊದಲ ಹಂತದಲ್ಲಿ ಪಶ್ಚಿಮ ವಲಯಕ್ಕೆ ಸೇರಿದ 4 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ 16.62 ಕಿ.ಮೀ. ಉದ್ದದ ರಸ್ತೆಗಳನ್ನು ವೈಟ್ ಟಾಪಿಂಗ್‌ಗೆ ಬದಲಾಯಿಸಲಾಗುತ್ತದೆ. ಈ ಕಾಮಗಾರಿಗೆ ಅಂದಾಜು 198 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.
‘ಬ್ರ್ಯಾಂಡ್ ಬೆಂಗಳೂರು - ಸುಗಮ ಸಂಚಾರ ಬೆಂಗಳೂರು’ ಪರಿಕಲ್ಪನೆ ಅಡಿಯಲ್ಲಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ಅನುದಾನದಲ್ಲಿ ವೈಟ್ ಟಾಪಿಂಗ್ ಯೋಜನೆಯನ್ನು ಅನುಷ್ಠಾನಿಸಲಾಗುತ್ತಿದೆ. ದೀರ್ಘ ಬಾಳಿಕೆಯ ಕಾರಣಕ್ಕಾಗಿ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳನ್ನೇ ಅಭಿವೃದ್ಧಿಗೆ ಆಯ್ಕೆ ಮಾಡಲಾಗಿದೆ. ರಸ್ತೆ ಅಭಿವೃದ್ಧಿಯ ಜತೆಗೆ ಅಲ್ಲಿನ ಪಾದಚಾರಿ ಮಾರ್ಗಗಳನ್ನು ಉನ್ನತೀಕರಿಸಲಾಗುತ್ತದೆ. ಮಾರ್ಗದುದ್ದಕ್ಕೂ ನೂತನ ವಿನ್ಯಾಸದ ವಿದ್ಯುತ್ ದೀಪಗಳನ್ನು ಅಳವಡಿಸಲಿದ್ದು, ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಚಾಮರಾಜಪೇಟೆ ರಸ್ತೆಗಳಿಗೆ ಹೊಸ ಲುಕ್:
ಪ್ರಸ್ತುತ ಕೈಗೆತ್ತಿಕೊಳ್ಳಲಿರುವ ವೈಟ್ ಟಾಪಿಂಗ್ ಯೋಜನೆಯಡಿಯಲ್ಲಿ ಚಾಮರಾಜಪೇಟೆ ಕ್ಷೇತ್ರದ ಪ್ರಮುಖ ರಸ್ತೆಗಳು ಮೇಲ್ದರ್ಜೆಗೇರಲಿದ್ದು, ಹೊಸ ರೂಪ ಪಡೆಯಲಿವೆ. ಪಂಪ ಮಹಾಕವಿ ರಸ್ತೆಯ ಮಿಂಟೋ ಆಸ್ಪತ್ರೆ ಜಂಕ್ಷನ್‌ನಿಂದ 5ನೇ ಮುಖ್ಯರಸ್ತೆ ವರೆಗೆ (0.40 ಕಿ.ಮೀ. ಉದ್ದ), ಬುಲ್ ಟೆಂಪಲ್ ರಸ್ತೆಯ ರಾಯನ್ ವೃತ್ತದಿಂದ 5ನೇ ಮುಖ್ಯರಸ್ತೆ ವರೆಗೆ (0.40 ಕಿ.ಮೀ.), 5ನೇ ಮುಖ್ಯರಸ್ತೆಯಲ್ಲಿ ಕೆ.ಆರ್.ರಸ್ತೆಯಿಂದ 9ನೇ ಅಡ್ಡರಸ್ತೆ ವರೆಗೆ (1.70 ಕಿ.ಮೀ.), 7ನೇ ಮುಖ್ಯರಸ್ತೆಯಲ್ಲಿ ಸಿರ್ಸಿ ವೃತ್ತದಿಂದ 5ನೇ ಮುಖ್ಯರಸ್ತೆ ವರೆಗೆ (0.75 ಕಿ.ಮೀ.), 2ನೇ ಮುಖ್ಯರಸ್ತೆಯಲ್ಲಿ 2ನೇ ಅಡ್ಡರಸ್ತೆಯಿಂದ 9ನೇ ಅಡ್ಡರಸ್ತೆವರೆಗೆ (1 ಕಿ.ಮೀ.) ಮಾರ್ಗವು ಅಭಿವೃದ್ಧಿಪಡಿಸಲಾಗುತ್ತದೆ.
ಸುಲ್ತಾನ್ ರಸ್ತೆಯ ಮೈಸೂರು ರಸ್ತೆಯಿಂದ 5ನೇ ಮುಖ್ಯರಸ್ತೆ ವರೆಗೆ (0.80 ಕಿ.ಮೀ.), 3ನೇ ಮುಖ್ಯರಸ್ತೆಯ 9ನೇ ಅಡ್ಡರಸ್ತೆಯಿಂದ ಪಂಪ ಮಹಾಕವಿ ರಸ್ತೆ ವರೆಗೆ (0.50 ಕಿ.ಮೀ.), 4ನೇ ಮುಖ್ಯರಸ್ತೆಯ 9ನೇ ಅಡ್ಡರಸ್ತೆಯಿಂದ ಪಂಪ ಮಹಾಕವಿ ರಸ್ತೆ ವರೆಗೆ (1.40 ಕಿ.ಮೀ.) ಹಾಗೂ ಸಿರ್ಸಿ ರಸ್ತೆಯ ಮೈಸೂರು ರಸ್ತೆಯಿಂದ ಚಾಮರಾಜಪೇಟೆ 4ನೇ ಅಡ್ಡರಸ್ತೆ ವರೆಗೆ (0.69 ಕಿ.ಮೀ.) ಮಾರ್ಗವನ್ನು ಮೇಲ್ದರ್ಜೆಗೇರಿಸಲಾಗುತ್ತದೆ.
ಶಂಕುಸ್ಥಾಪನೆ ಕಾಣಲಿರುವ ರಸ್ತೆಗಳ ವಿವರ:
ಕ್ಷೇತ್ರದ ಹೆಸರು ರಸ್ತೆ ಕಿ.ಮೀ. ವೆಚ್ಚ *
ಮಲ್ಲೇಶ್ವರ 2 3.00 30
ಮಹಾಲಕ್ಷ್ಮೀಪುರ 3 2.14 25
ಗಾಂಧಿನಗರ 4 3.84 50
ಚಾಮರಾಜಪೇಟೆ 9 7.64 93
ಒಟ್ಟು 18 16.62 198
* ಕೋಟಿ ರೂಪಾಯಿಗಳಲ್ಲಿ