ಜಿಲ್ಲೆ

ಬಾವಿ ನೀರು ಸಂಪೂರ್ಣ ಕಲುಷಿತ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಮಜೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸುತ್ತಮುತ್ತಲಿನ ಹಲವು ಮನೆಗಳ ಬಾವಿ ನೀರು ಏಕಾಏಕಿ ಕಲುಷಿತಗೊಂಡಿದ್ದು, ಮಳೆಗಾಲದಲ್ಲಿಯೂ ದೈನಂದಿನ ಬಳಕೆ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಗ್ರಾಮದ ಉಮ್ಮರ್ ಸಾಹೇಬ್, ಅಮಣಿ ಪಾಣಾರ, ಸಂಕ್ರಾಯ ಆಚಾರ್ಯ, ರುಕ್ಮಿಣಿ ಭಟ್, ಮಾಲಿನಿ ರಾವ್, ಸೂರ್ಯ ಮೇಸ್ತ್ರಿ, ಸುಬ್ರಾಯ ಭಟ್, ಹಯವದನ ಪುರಾಣಿಕ್, ಸಂಜೀವ ದೇವಾಡಿಗ, ಹರಿದಾಸ್ ಭಟ್ ಅವರ ಮನೆಯ ಬಾವಿಯ ನೀರು ಸಂಪೂರ್ಣ ಕಲುಷಿತಗೊಂಡಿದೆ. ಕಲುಷಿತಗೊಂಡಿರುವ ನೀರು ಕುಡಿಯುವುದಕ್ಕೆ ಮಾತ್ರವಲ್ಲದೆ ದಿನಬಳಕೆಗೂ ಕಷ್ಟವಾಗಿದೆ. ಪಕ್ಕದ ಮನೆ ಬಾವಿ ನೀರನ್ನು ಕುಡಿಯಲು ಬಳಸಿ, ಗ್ರಾಪಂನಿಂದ ಸರಬರಾಜಾಗುವ ನಳ್ಳಿ ನೀರನ್ನು ಇತರ ಕೆಲಸಗಳಿಗೆ ಬಳಸಿಕೊಳ್ಳುವಂತಾಗಿದೆ.

ಸೂಕ್ಷ್ಮಾಣು ಜೀವಿ, ಅಮೋನಿಯಾ ಅಂಶ ಹೆಚ್ಚಿರುವ ಮಾಹಿತಿ

ಬಾವಿ ನೀರು ಕಲುಷಿತಗೊಂಡಿರುವ ಬಗ್ಗೆ ಸ್ಥಳೀಯರು ಮಜೂರು ಗ್ರಾಪಂ ಮತ್ತು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅವರು ಎರಡೆರಡು ಬಾರಿ ಭೇಟಿ ನೀಡಿ ನೀರಿನ ಮಾದರಿ ಕೊಂಡೊಯ್ದಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ನೀರಿನ ಮಾದರಿ ಸಂಗ್ರಹಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಕೆಲವು ಮನೆಯವರು ಉಡುಪಿಯ ಖಾಸಗಿ ಪ್ರಯೋಗಾಲಯದಲ್ಲಿ ನೀರಿನ ಮಾದರಿ ಪರೀಕ್ಷೆಗಾಗಿ ನೀಡಿದ್ದಾರೆ. ಅದರಲ್ಲಿ ಸೂಕ್ಷ್ಮಾಣು ಜೀವಿಗಳು ಮತ್ತು ಅಮೋನಿಯಾ ಅಂಶ ಹೆಚ್ಚಾಗಿರುವುದು ಧೃಢ ಪಟ್ಟಿದೆ. ಆದರೆ ಈ ಪರಿಸ್ಥಿತಿ ಯಾಕಾಗಿ ನಿರ್ಮಾಣವಾಗಿದೆ ಎನ್ನುವುದು ನಿಗೂಢವಾಗಿದೆ.

ಹತ್ತು ವರ್ಷಗಳಿಂದ ಇಲ್ಲಿ ವಾಸವಿದ್ದೇವೆ. ಮೊದಲ ಬಾರಿಗೆ ನಮ್ಮ ಮನೆಯ ಬಾವಿಯ ನೀರು ಕಲುಷಿತಗೊಂಡಿದೆ. ನೀರು ಸಂಪೂರ್ಣ ಕೆಂಪಾಗಿದ್ದು ದುರ್ವಾಸನೆ ಬರುತ್ತಿದೆ. ಮಳೆಗಾಲ ಆರಂಭಗೊಂಡ ಬಳಿಕ ಸಮಸ್ಯೆ ತಲೆ ದೋರಿದ್ದು, ಗ್ರಾಪಂ ಜತೆಗೆ ನಾವು ಕೂಡಾ ನೀರನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ರವಾನಿಸಿದ್ದೇವೆ. ನೀರು ಹಾಳಾಗಿರುವ ಬಗ್ಗೆ ವರದಿ ಬಂದಿದೆ. ಪ್ರಯೋಗಾಲಯದ ವೈದ್ಯರು ಔಷಧ ಕೊಟ್ಟಿದ್ದಾರೆ. ಆದರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ - ಜನಾರ್ದನ ರಾವ್, ಮಜೂರು ನಿವಾಸಿ ಬಾವಿ ನೀರು ಕಲುಷಿತವಾಗಿರುವ ಬಗ್ಗೆ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ತಂದು ಪರೀಕ್ಷಿಸಲಾಗಿದೆ. ನೀರಿನಲ್ಲಿ ಸೂಕ್ಷ್ಮಾಣು ಜೀವಿಗಳು, ಅಮೋನಿಯಾ ಅಂಶಗಳು ಅಧಿಕವಾಗಿ ಪತ್ತೆಯಾಗಿವೆ. ಕೊಳೆತ ವಾಸನೆ ಹೆಚ್ಚಿದ್ದು, ಬಾವಿ ನೀರು ಕೆಸರಿನ ರಾಡಿಯಂತಾಗಿರುವುದು ಕಂಡುಬಂದಿದೆ. - ಡಾ.ಅವಿಲಾ ಡಿಸೋಜ, ಖಾಸಗಿ ಪ್ರಯೋಗಾಲಯ ತಜ್ಞೆ ಉಡುಪಿ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಆರು ಮನೆಗಳಿಂದ ನೀರು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ಎರಡು ಬಾವಿಗಳ ನೀರು ಕುಡಿಯುವುದಕ್ಕೆ ಯೋಗ್ಯವಾಗಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಮತ್ತೆರಡು ಬಾವಿಯ ನೀರು ಕಲುಷಿತಗೊಂಡಿರುವ ಬಗ್ಗೆ ಮಾಹಿತಿ ಲಭಿಸಿರುವುದರಿಂದ ಅಲ್ಲಿಯ ನೀರನ್ನೂ ಪರೀಕ್ಷೆಗಾಗಿ ರವಾನಿಸಲಾಗಿದೆ. ಸಮಸ್ಯೆ ಮೂಲವನ್ನು ಪತ್ತೆ ಹಚ್ಚಿ ಪರಿಹಾರ ಕಂಡುಕೊಳ್ಳಲಾಗುವುದು. - ಪ್ರಸಾದ್ ಶೆಟ್ಟಿ ವಳದೂರು, ಮಜೂರು ಗ್ರಾಪಂ ಅಧ್ಯಕ್ಷ