ಎನ್.ಆರ್.ಪುರ: ದುರ್ಬಲ ಮನಸ್ಸಿನವರು ದುಶ್ಚಟಗಳಿಗೆ ಬಲಿಯಾಗಿ ಉಜ್ವಲ ಭವಿಷ್ಯ ಹಾಳು ಮಾಡಿಕೊಳ್ಳುತ್ತಾರೆ ಎಂದು ಲೇಖಕಿ ಭಾಗ್ಯಾ ನಂಜುಂಡಸ್ವಾಮಿ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದಿಂದ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ತಂಬಾಕು ಸೇವನೆ ಆರೋಗ್ಯದ ಮೇಲೆ ಅನೇಕ ರೀತಿಯ ಪರಿಣಾಮಗಳನ್ನು ಬೀರುತ್ತದೆ. ಕ್ಯಾನ್ಸರ್, ಬುದ್ಧಿಮಾಂಧ್ಯ, ಹೃದಯ ಸಂಬಂಧಿ ಕಾಯಿಲೆಗಳು, ಶ್ವಾಸಕೋಶದ ರೋಗಗಳು ಹರಡುತ್ತವೆ ಎಂದರು.
ಉದ್ಯಮದ ಹಸ್ತಕ್ಷೇಪದಿಂದ ನಿಮ್ಮನ್ನು ರಕ್ಷಿಸುತ್ತದೆ ಎಂಬುದು ಈ ವರ್ಷದ ಧ್ಯೇಯ ವಾಕ್ಯ. ತಂಬಾಕು ಉತ್ಪಾದನೆ ಪರಿಸರದ ಮೇಲೂ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ ದುಶ್ಚಟಗಳಿಂದ ದೂರವಿರಬೇಕು. ಉಜ್ವಲ ಭವಿಷ್ಯವನ್ನು ತಮ್ಮದಾಗಿಸಿಕೊಳ್ಳಬೇಕು. ಯುವ ಜನಾಂಗ ಕ್ರೀಡೆ, ಮನೋರಂಜನೆ, ಉದ್ಯೋಗದ ಕಡೆ ಗಮನಹರಿಸಿದರೆ ದುಶ್ಚಟಗಳ ಕಡೆ ಗಮನ ಬರುವುದಿಲ್ಲ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನ ಜಾಗೃತಿ ವೇದಿಕೆಯಿಂದ ರಾಜ್ಯಾದ್ಯಂತ ತಂಬಾಕು ರಹಿತ ದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು.
ನಾಗಲಾಪುರ ಒಕ್ಕೂಟದ ಅಧ್ಯಕ್ಷೆ ರಾಜೇಶ್ವರಿ, ಸಿದ್ದಲಿಂಗಪ್ಪ, ಸುವಿಧಾ, ಪವಿತ್ರಾ, ಶಶಿಕಲಾ, ಕವಿತಾ, ನಾದ್ಮಿನ್, ಗಾಯತ್ರಿ ಇದ್ದರು.