ಬೇಲೂರು ಪಟ್ಟಣದ ಮುಖ್ಯರಸ್ತೆಯಲ್ಲಿ ಮುಸ್ಲಿಮರು ಮೆರವಣಿಗೆ ಸಾಗುತ್ತಿರುವುದು. 
ಜಿಲ್ಲೆ

ವಕ್ಫ್ ತಿದ್ದುಪಡಿ ಮಸೂದೆ ರದ್ದಾಗಲಿ

ಅಭಿನಯ್ ಎಚ್.ಎಂ

ಬೇಲೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಮುಸ್ಲಿಮರು ತಹಸೀಲ್ದಾರ್ ಎಂ.ಮಮತಾಗೆ ಮನವಿ ಪತ್ರ ಸಲ್ಲಿಸಿದರು.

ಇದಕ್ಕೂ ಮುನ್ನ ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಮಂಗಳವಾರ ಪುಷ್ಪಹಾರ ಸಲ್ಲಿಸಿ, ಮುಖ್ಯರಸ್ತೆ ಮೂಲಕ ತಾಲೂಕು ಕಚೇರಿಗೆ ಮೆರವಣಿಗೆಯಲ್ಲಿ ಸಾಗಿದರು. ಈ ಸಂದರ್ಭ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಅಬ್ದುಲ್ ಸಮದ್ ಮಾತನಾಡಿ, ಕೇಂದ್ರ ಸರ್ಕಾರ ಬಹುಮತ ಇದೆಯೆಂದು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಕ್ಫ್ ಮಸೂದೆ ಅಂಗಿಕರಿಸಿರುವುದನ್ನು ಸಮುದಾಯ ಖಂಡಿಸುತ್ತದೆ. ಸಂಸತ್‌ನಲ್ಲಿ ಯಾವುದೇ ಮಸೂದೆ ಮಂಡಿಸುವುದಕ್ಕೂ ಮುನ್ನ ಸಾರ್ವಜನಿಕರು, ತಜ್ಞರ ಅಭಿಪ್ರಾಯ ಪಡೆದು ಮಂಡಿಸಲಾಗುತಿತ್ತು. ಆದರೆ ಈಗಿನ ಕೇಂದ್ರ ಸರ್ಕಾರ ಮಸೂದೆ ಮಂಡಿಸುವುದಕ್ಕೂ ಮುನ್ನ ಯಾವುದೇ ಅಭಿಪ್ರಾಯ ಸಂಗ್ರಹಿಸದೆ ಸಂವಿಧಾನ ವಿರೋಧಿಯಾಗಿ ವಕ್ಫ್ ವಿರೋಧಿ ಮಸೂದೆಯನ್ನು ಜಾರಿಗೆ ತಂದಿದೆ ಎಂದು ಕಿಡಿಕಾರಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಯ್ಯದ್ ತೌಫಿಕ್ ಮಾತನಾಡಿ, ಕೇಂದ್ರ ಸರ್ಕಾರ ವಕ್ಫ್ ಮಸೂದೆ ಮಂಡಿಸಿದ್ದಕ್ಕೆ ನಮ್ಮ ವಿರೋಧವಿದೆ. ಮೋದಿ ಅಧಿಕಾರ ಸ್ವೀಕರಿಸುವಾಗ ಮಾತನಾಡಿದ್ದನ್ನು ಸ್ವಾಗತಿಸಿದ್ದೆವು. ಆದರೆ ಅವರು ಅಂದು ಮಾತನಾಡಿದ್ದನ್ನು ಮರೆತಿದ್ದಾರೆ.ಮುಸ್ಲಿಮರಿಗೆ ತೊಂದರೆ ಕೊಡುವುದಕ್ಕಾಗಿಯೇ ವಕ್ಫ್ ವಿರೋಧಿ ಕಾಯ್ದೆ ಜಾರಿಗೆ ತರಲಾಗಿದೆ. ಆದ್ದರಿಂದ ಈ ಸಂವಿಧಾನ ವಿರೋಧಿ ಮಸೂದೆಯನ್ನು ವಾಪಸ್ ಪಡೆಯಬೇಕು ಎಂದರು.

ಪುರಸಭೆ ಸದಸ್ಯರಾದ ಜಮಾಲೂದ್ದೀನ್, ಅಕ್ರಂ ಷರೀಫ್, ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ತೌಫಿಕ್, ನವೀದ್ ಅಹಮದ್, ನಹೀಂ ಹುರ್ ರೆಹಮಾನ್, ಅಬ್ದುಲ್ ಖಾದರ್, ತಜಮುಲ್ ಅಹಮದ್, ತನ್ವೀರ್ ಪಾಷಾ, ನೂರ್ ಅಹಮದ್, ಮಹಮದ್ ಅಸ್ಲಂ, ಅಬ್ರಾರ್, ಇರ್ಷಾದ್ ಪಾಲ್ಗೊಂಡಿದ್ದರು.

ಪ್ರತಿಭಟನೆ ಸಂದರ್ಭ ಯಾವುದೇ ಅಹಿತಕ ಘಟನೆಗೆ ಅವಕಾಶವಾಗದಂತೆ ಅಡಿಷನಲ್ ಎಸ್ಪಿ ತಮ್ಮಯ್ಯ, ಡಿವೈಎಸ್‌ಪಿ ಲೋಕೇಶ್, ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ, ವೃತ್ತ ನಿರೀಕ್ಷಕ ಜಗದೀಶ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.