ವಿಜಯಪುರ: ತಂತ್ರಜ್ಞಾನ, ಆಹಾರ ಉತ್ಪಾದನೆ, ನ್ಯಾಯದಾನ ವ್ಯವಸ್ಥೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಅನೇಕ ಸುಧಾರಣೆಗಳನ್ನು ತರಲಾಗಿದ್ದು ಆತ್ಮನಿರ್ಭರ ಸಾಕಾರವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ವಾವಲಂಬನೆ ಹಾಗೂ ಸ್ವದೇಶಿ ಉತ್ಪಾದನೆಗೆ ಆದ್ಯತೆ ಕಲ್ಪಿಸಿದ ಪರಿಣಾಮ ಆತ್ಮ ನಿರ್ಭರ ಭಾವ ಸಾಕಾರ ರೂಪ ತೆಳೆದಿದೆ. 2014 ರಲ್ಲಿ ಕೇವಲ 25.5 ಕೋಟಿ ಅಂತರ್ಜಾಲ ಸಂಪರ್ಕವಿದ್ದು, ಈ ಸಂಖ್ಯೆ 97 ಕೋಟಿಗೆ ಏರಿಕೆಯಾಗಿದೆ. 2.14 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ಕಲ್ಪಿಸಿ ಆಧುನಿಕತೆ ಸ್ಪರ್ಶ ಕಲ್ಪಿಸಲಾಗಿದೆ ಎಂದರು.
ಗಗನಯಾನ ಗಗನಕುಸುಮವಾಗಿದ್ದ ಸಂದರ್ಭದಲ್ಲಿ ನಮ್ಮ ಸರ್ಕಾರ ಈ ವಲಯದಕ್ಕೂ ಆದ್ಯತೆ ನೀಡಿದ್ದು, ಬಾಹ್ಯಾಕಾಶದಲ್ಲಿಯೇ ಅನುಪಮ ಸಾಧನೆ ಮಾಡುವ ಮೂಲಕ ದಿಟ್ಟ ಹೆಜ್ಜೆ ಇರಿಸಿದೆ. ಐತಿಹಾಸಿಕ ಚಂದ್ರಯಾನ ಯಶಸ್ವಿ, 104 ಉಪಗ್ರಹಗಳನ್ನು ಒಂದೇ ಉಡಾವಣೆಯಲ್ಲಿ ಯಶಸ್ವಿಗೊಳಿಸಲಾಗಿದೆ. ಸೈನ್ಯಕ್ಕೂ ದೊಡ್ಡ ಬಲ ತುಂಬಿದ್ದು, 97 ತೇಜಸ್ ನಿರ್ಮಾಣ ಖರೀದಿಗಾಗಿ ಎಚ್‌ಎಎಲ್ ಜೊತೆ ಒಡಂಬಡಿಕೆ, ಅಮಾಯಕರ ಸಾವಿಗೆ ಕಾರಣವಾದ ಉಗ್ರರ ಸರ್ವನಾಶಕ್ಕೆ ಕಾರಣವಾದ ಆಪರೇಷನ್ ಸಿಂಧೂರ ನಮ್ಮ ಸೈನ್ಯದ ಸ್ವಾಭಿಮಾನದ ಪ್ರತೀಕವೂ ಹೌದು ಎಂದರು.
ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಮೂಲಕ 1.6 ಲಕ್ಷಕ್ಕೂ ಅಧಿಕ ಸ್ಟಾರ್ಟ್ ಅಪ್‌ಗಳಿಗೆ ಉತ್ತೇಜನ ಮಾಡುವ ಮೂಲಕ 17.6 ಲಕ್ಷ ಉದ್ಯೋಗಗಳ ಸೃಷ್ಟಿ ಮಾಡಲಾಗಿದ್ದು ಬಡತನ ಪ್ರಮಾಣ ಕಡಿಮೆ ಮಾಡುವಲ್ಲಿ ಆದ್ಯ ಪಾತ್ರ ವಹಿಸಿದೆ ಎಂದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಪ್ರತಿಯೊಬ್ಬ ನಾಗರಿಕ ಸ್ವಾವಲಂಬಿಯಾಗಬೇಕು ಎನ್ನುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅನೇಕ ಜನಪರ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದಾರೆ. ಜೀವನಾವಶ್ಯಕ ವಸ್ತುಗಳ ಮೇಲೆ ಜಿಎಸ್‌ಟಿ ಕಡಿತಗೊಳಿಸುವ ಮೂಲಕ ಜನಸಾಮಾನ್ಯರಿಗೆ ದೊಡ್ಡ ಉಡುಗೊರೆ ನೀಡಿದ್ದು, ಸ್ವಾವಲಂಬಿ, ಸ್ವದೇಶಪ್ರೇಮ, ಸ್ವಾಭಿಮಾನದ ಸೂತ್ರಗಳು ಬದುಕಿನ ಭಾಗವಾಗಿಸಿಕೊಳ್ಳಲು ಕೇಂದ್ರ ಸರ್ಕಾರ ನೀಡುತ್ತಿರುವ ಕೊಡುಗೆ ಅನನ್ಯ ಎಂದರು.
ಆತ್ಮ ನಿರ್ಭರ ಜಿಲ್ಲಾ ಸಂಚಾಲಕ ಎಸ್.ಎ. ಪಾಟೀಲ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಉಪ ಮೇಯರ್ ಸುಮಿತ್ರಾ ಜಾಧವ, ಮುಖಂಡರಾದ ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ಮಳುಗೌಡ ಪಾಟೀಲ, ಕಾಸುಗೌಡ ಬಿರಾದಾರ, ಸಂಜೀವ ಐಹೊಳಿ, ಸಾಬು ಮಾಶ್ಯಾಳ, ಮಲ್ಲಿಕಾರ್ಜುನ ಜೋಗೂರ, ಕೃಷ್ಣಾ ಗುನ್ನಾಳಕರ, ಶಿಲ್ಪಾ ಕುದರಗೊಂಡ, ಪ್ರಭುಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ ದೇವರಮನಿ, ಡಾ.ಸುರೇಶ ಬಿರಾದಾರ, ಸ್ವಪ್ನಾ ಕಣಮುಚನಾಳ ಮತ್ತಿತರರಿದ್ದರು.