ತಿ.ನರಸೀಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಹಾಗೂ ಪುತ್ಥಳಿ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿಕೊಡಲು ತಾಲೂಕು ಆಡಳಿತ ಬೇಜವಾಬ್ದಾರಿ ನಡೆ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ತವರು ಕ್ಷೇತ್ರದಲ್ಲಿ ಮತದಾನ ಬಹಿಷ್ಕಾರ ಮಾಡಲು ತುರುಗನೂರು ಗ್ರಾಮದ ದಲಿತರು ನಿರ್ಧಾರ ಕೈಗೊಂಡಿದ್ದಾರೆ.
ಪಟ್ಟಣದ ಎಪಿಎಂಸಿ ಆವರಣದಲ್ಲಿ ತಾಲೂಕಿನ ತುರುಗನೂರು ಗ್ರಾಮದ ನೂರಾರು ದಲಿತರು ಸಭೆ ಸೇರಿ ಏ.26ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವ ತೀರ್ಮಾನ ಕೈಗೊಂಡರು.
ಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಯುವ ಮುಖಂಡ ಟಿ.ಎಸ್.ಮಹೇಂದ್ರ ಮಾತನಾಡಿ, ತುರುಗನೂರು ಗ್ರಾಮದ ಮಂಡ್ಯ-ಬನ್ನೂರು ಮುಖ್ಯ ರಸ್ತೆಯ ಎರಡೂ ಬದಿಯಲ್ಲಿಯೂ ಪೂರ್ವ ಕಾಲದಿಂದಲೂ ದಲಿತ ಕುಟುಂಬಗಳು ವಾಸವಾಗಿದ್ದು, ಪೂರ್ವಿಕರು ನೂರಾರು ವರ್ಷಗಳ ಹಿಂದೆಯೇ ರಸ್ತೆಯಲ್ಲಿ ಹರಿಯುತ್ತಿದ್ದ ಮಳೆ ನೀರು ಸಂಗ್ರಹವಾಗಲಿ ಎಂದು ಗುಂಡಿಯೊಂದನ್ನು ನಿರ್ಮಿಸಿ ಏರಿ ಮಾಡಿದ್ದರು. ಅಲ್ಲಿ ಸಂಗ್ರಹವಾದ ನೀರನ್ನು ಜನ ಜಾನುವಾರಿಗೆ ಕುಡಿಯಲು ಬಳಸಲಾಗುತ್ತಿತ್ತು. 2020-21ರ ವರೆಗೂ ಸವರ್ಣೀಯರು ಉದ್ದೇಶಿತ ಸ್ಥಳದಲ್ಲಿ ಮನೆ ಕಟ್ಟಿರಲಿಲ್ಲ. ಈಗ ರಸ್ತೆಯ ಎರಡು ಬದಿಗಳಲ್ಲಿ ದೊಡ್ಡ ಚರಂಡಿ ನಿರ್ಮಾಣ ಮಾಡಲಾಗಿದೆ. ಸಿಮೆಂಟ್ ರಸ್ತೆ ನಿರ್ಮಿಸಿರುವುದರಿಂದ ಮಳೆ ನೀರು ಸಂಗ್ರಹವಾಗುತ್ತಿಲ್ಲ. ಹಳ್ಳದ ವಿಸ್ತೀರ್ಣ 6 ಗುಂಟೆ ಇದ್ದು, ಇಲ್ಲಿ ಗಿಡಗಂಟಿಗಳು ಬೆಳೆದು ಹಾವು, ಚೇಳುಗಳ ವಾಸಸ್ಥಳವಾಗಿ ಮಾರ್ಪಾಡಾಗಿದೆ ಎಂದರು.
ಗ್ರಾಮದಲ್ಲಿ ಅಂಬೇಡ್ಕರ್ ಭವನವಾಗಲೀ, ಪುತ್ಥಳಿಯಾಗಲಿ ಇಲ್ಲದ್ದರಿಂದ ಸ್ಥಳ ನೀಡುವಂತೆ ಪಂಚಾಯಿತಿಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸರ್ವೇ ನಂ 72/4 ಸಿ ಯಲ್ಲಿ ಖರಾಬು ಜಮೀನಿನ 6 ಗುಂಟೆ ಜಾಗವನ್ನು ಅಂಬೇಡ್ಕರ್ ಭವನ ನಿರ್ಮಿಸಲು ಸರ್ವ ಸದಸ್ಯರು ಸೇರಿ ನಿರ್ಣಯ ಮಾಡಿ ಅದರ ಪ್ರತಿ ನೀಡಿದ್ದಾರೆ. ಅದರಂತೆ ಪಂಚಾಯಿತಿ ನೀಡಿದ ಜಮೀನು ಸೂಕ್ತವೆಂದು ಪರಿಗಣಿಸಿ ತಹಸೀಲ್ದಾರ್ ಕಚೇರಿಯಿಂದ ಸರ್ವೇ ಮಾಡಿ ನಕ್ಷೆ ತಯಾರಿಸಿದ್ದಾಗ್ಯೂ ಸಂಘದ ಹೆಸರಿಗೆ ಖಾತೆ ಹಾಗೂ ಆರ್ಟಿಸಿ ಆಗಿಲ್ಲ ಎಂದು ಮಹೇಂದ್ರ ದೂರಿದರು.
2014-15 ರಲ್ಲಿ ಕಂದಾಯ ಸಚಿವರಾಗಿದ್ದ ಮಹದೇವಪ್ಪ ಅವರು ನಮ್ಮ ಮನವಿಗೆ ಸ್ಪಂದಿಸಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 12 ಲಕ್ಷ ರೂ. ಮಂಜೂರು ಮಾಡಿರುವುದಾಗಿ ತಿಳಿಸಿದ್ದರೂ ನಂತರ ಜಾಗವೇ ನಿಗದಿಯಾಗಿಲ್ಲ ಎಂಬ ಕಾರಣಕ್ಕೆ ಹಣ ಬೇರೆ ಗ್ರಾಮಕ್ಕೆ ಕಾಮಗಾರಿಗೆ ವರ್ಗಾವಣೆ ಮಾಡಲಾಗಿತ್ತು. ಈ ಸಂಬಂಧ ಜಾಗ ಮಂಜೂರು ಮಾಡಿಕೊಡುವಂತೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿ ಜನಸ್ಪಂದನ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರು ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ಮಾಡಿದ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಭೀಮರಾವ್ ಅವರು ಉದ್ದೇಶಿತ ಜಾಗ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸೂಕ್ತ ಜಾಗವೆಂದು ತಹಸೀಲ್ದಾರ್‌ರಿಗೆ ವರದಿ ಸಲ್ಲಿಸಿದ್ದರು. ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಬನ್ನೂರಿನ ಉಪತಹಸೀಲ್ದಾರ್ ಅವರು ಸಹ ಸೂಕ್ತ ಜಾಗವೆಂದು ತಹಸೀಲ್ದಾರ್ ಅವರಿಗೆ ವರದಿ ನೀಡಿದರೂ ಸಹ ತಹಸೀಲ್ದಾರ್ ಜಮೀನು ಮಂಜೂರು ಮಾಡಿಕೊಡಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂಬಂಧ ಕರ್ನಾಟಕ ಅನುಸೂಚಿತ ಜಾತಿಗಳು, ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದಲ್ಲಿಯೂ ದೂರು ನೀಡಿದ್ದು, ಅಲ್ಲಿಂದಲೂ ತಹಸೀಲ್ದಾರ್‌ರಿಗೂ ನೊಟೀಸ್ ಜಾರಿ ಮಾಡಿರುತ್ತಾರೆ. ಇಷ್ಟೆಲ್ಲ ಪುರಾವೆಗಳನ್ನು ನೀಡಿದರೂ ದಲಿತರಾದ ನಮಗೆ ತಹಸೀಲ್ದಾರ್ ಕಚೇರಿಯಿಂದ ನ್ಯಾಯ ಸಿಗುತ್ತಿಲ್ಲ. ತಾಲೂಕು ಆಡಳಿತದ ನಡವಳಿಕೆಯಿಂದ ಬೇಸತ್ತಿರುವ ನಾವು ಗ್ರಾಮಸ್ಥರೆಲ್ಲರೂ ಲೋಕಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇವೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಅಂಬೇಡ್ಕರ್ ಭವನ ಹಾಗೂ ಪುತ್ಥಳಿ ನಿರ್ಮಾಣಕ್ಕೆ 6 ಗುಂಟೆ ಖರಾಬು ಜಮೀನನ್ನು ಅಂಬೇಡ್ಕರ್ ಯುವಕರ ಸಂಘಕ್ಕೆ ಮಂಜೂರು ಮಾಡಿಸಿಕೊಡುವಂತೆ ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಟಿ.ಎಸ್.ಆನಂದ್, ಉಪಾಧ್ಯಕ್ಷ ಟಿ.ಎಸ್.ಮಹೇಶ್, ಯಜಮಾನರಾದ ಗೂಳಯ್ಯ, ಸುರೇಶ್, ಗುರುಸ್ವಾಮಿ ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಇದ್ದರು.