ಶನಿವಾರಸಂತೆ: ದಿನಸಿ ಪದಾರ್ಥ ಸೇರಿದಂತೆ ತರಕಾರಿ ಹಾಗೂ ದಿನಬಳಕೆ ಪದಾರ್ಥ ಖರೀದಿಸುವ ಸಲುವಾಗಿ ವಾರದ ಒಂದು ದಿನ ಸಂತೆಗೆ ಶನಿವಾರ ಬರುತ್ತಿದ್ದ ಗ್ರಾಮಕ್ಕೆ ಶನಿವಾರಸಂತೆ ಎಂದು ಹೆಸರು ಬಂತು.
ಈ ಮೊದಲು ಕಾಡು ಬಿದಿರಿನಿಂದ ಕೂಡಿದ್ದ ಗ್ರಾಮವಾಗಿದ್ದರಿಂದ ಬಿದರೂರು ಎಂದು ಹೆಸರಿತ್ತು. ಶನಿವಾರ ದಿನ ಸಂತೆ ನಡೆಯುವುದರಿಂದ ಶನಿವಾರದ ಸಂತೆ ಎಂದು ಕರೆಯುತ್ತಿದ್ದರಿಂದ ಕಾಲಕ್ರಮೇಣ ಅದು ಶನಿವಾರಸಂತೆ ಗ್ರಾಮವಾಗಿ ಮಾರ್ಪಾಡು ಆಯಿತು.
ಶನಿವಾರಸಂತೆ 1954ರಲ್ಲಿ ನೋಟಿಫೈಡ್ ಏರಿಯವಾಗಿ ಮಾರ್ಪಟ್ಟು ಪುರಸಭೆಯಾಗಿ ನಂತರ ಮಂಡಲ ಪಂಚಾಯಿತಿಯಾಗಿ ಇದೀಗ ಗ್ರಾಮ ಪಂಚಾಯಿತಿಯಾಗಿ ಹಿಂಬಡ್ತಿ ಹೊಂದಿರುವ ದುರಂತ ಇತಿಹಾಸ ಈ ಗ್ರಾಮಕ್ಕಿದೆ.
ಫೀ.ಮಾ. ಕಾರ್ಯಪ್ಪ ಅವರ ಹುಟ್ಟೂರು ಶನಿವಾರಸಂತೆ. ಇಂದಿಗೂ ಅವರು ಹುಟ್ಟಿದ ಮನೆಯನ್ನು ಗ್ರಂಥಾಲಯವಾಗಿ ಮಾಡಲಾಗಿದೆ. ಸ್ಮಾರಕ ಮಾಡಬೇಕು ಎಂಬ ಕೂಗು ಸ್ಥಳೀಯರದ್ದು. ಆದರೆ ಈ ಬಗ್ಗೆ ಸಂಬಂಧಪಟ್ಟವರು ಹೆಚ್ಚು ಆಸಕ್ತಿ ತೋರದೆ ಇರುವುದರಿಂದ ಗ್ರಂಥಾಲಯವಾಗಿಯೇ ಉಳಿದಿದೆ. ಆದರೆ, ಗ್ರಂಥಪಾಲಕರು ಇಲ್ಲದೆ ತೆರೆಯುತ್ತಿಲ್ಲ. ಇದರಿಂದ ಇದ್ದೂ ಇಲ್ಲದಂತಿದೆ.
ಶನಿವಾರಸಂತೆ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಿಸದಿರುವುದು, ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು, ಶನಿವಾರಸಂತೆ ಶತಮಾನ ಕಂಡ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ತಡೆಗೋಡೆ ಶಿಥಿಲವಾಗಿದ್ದರೂ ಸರಿಪಡಿಸದಿರುವುದು ದುರಂತ. ಹೀಗೆ ನೂರೆಂಟು ಸಮಸ್ಯೆಗಳನ್ನು ಹೊತ್ತು ಮಲಗಿದ್ದು ಇವುಗಳನ್ನು ಸರಿಪಡಿಸುವ ಗೋಜಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹೋಗಿಲ್ಲ.
ಶನಿವಾರಸಂತೆ ಒಂದನೇ ವಿಭಾಗದಲ್ಲಿ ಹಾಗೂ ಶನಿವಾರಸಂತೆ ಕೆ.ಆರ್.ಸಿ. ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆ ಅನೇಕ ವರ್ಷಗಳಿಂದ ಆಗುತ್ತಿರುವ ಸಮಸ್ಯೆಯಾಗಿದೆ. ಶನಿವಾರಸಂತೆಯಿಂದ 40ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಆದರೆ ಈ ಬಸ್‌ಗಳ ನಿಲುಗಡೆಗೆ ವ್ಯವಸ್ಥೆ ಇಲ್ಲದೆ ಇರುವುದರಿಂದ ರಸ್ತೆ ಬದಿಯಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು ನಿಲ್ಲಿಸುವಂತಾಗಿವೆ. ಅನೇಕ ವರ್ಷಗಳಿಂದ ಮನವಿ ಪತ್ರ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಇದೀಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಟ್ಟಡ ಕೆಲಸ ಪ್ರಾರಂಭವಾಗಿದೆ.
ಒಂದನೇ ವಾರ್ಡ್‌ನಲ್ಲಿ ಅನೇಕ ಸರ್ಕಾರಿ ಕಚೇರಿಗಳಿದ್ದು ಇಲ್ಲಿಗೆ ಬರುವವರು ಶೌಚಕ್ಕಾಗಿ ರಸ್ತೆ ಬದಿಯನ್ನು ಬಳಕೆ ಮಾಡಿಕೊಳ್ಳುತಿದ್ದಾರೆ. ಈ ಹಿಂದೆ ಒಂದು ಶೌಚಗೃಹ ನಿರ್ಮಿಸಿದ್ದರೂ ಅದು ಸರಿಯಾಗಿ ಇಲ್ಲದಿದ್ದರಿಂದ ಬಳಕೆಗೆ ಯೋಗ್ಯವಾಗಿಲ್ಲ. ಹೀಗಾಗಿ ಮಹಿಳೆಯರ ಕಷ್ಟವನ್ನು ಹೇಳಲು ಸಾಧ್ಯವಿಲ್ಲ.
ಜಲಜೀವನ ಕುಡಿಯುವ ನೀರಿನ ಯೋಜನೆಯಿಂದ ಪೈಪ್ ಅಳವಡಿಸಲು ತೆಗೆದಿರುವ ಗುಡಿಗಳು ಮಳೆಗೆ ಕುಸಿದಿದ್ದು, ಕೆಲವರ ಮನೆ ಮುಂಭಾಗ ರಸ್ತೆ ಅವ್ಯವಸ್ಥೆಯಾಗಿದೆ. ಮಳೆಗಾಲದಲ್ಲಿ ಸಮಸ್ಯೆ ಗಂಭೀರವಾಗುವ ಸಾಧ್ಯತೆ ಹೆಚ್ಚಿದೆ.
ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧನೆ
ಶನಿವಾರಸಂತೆ ಗ್ರಾಮ ಪಂಚಾಯಿತಿಯಲ್ಲಿ 7500ಕ್ಕೂ ಅಧಿಕ ಜನಸಂಖ್ಯೆಯನ್ನು ಒಳಗೊಂಡಿದೆ. 1 ಸರ್ಕಾರಿ ಪ್ರಾಥಮಿಕ ಶಾಲೆ, 1 ಉರ್ದು ಶಾಲೆ, 1 ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ 3 ಪ್ರೌಢಶಾಲೆ, 2 ಪದವಿ ಪೂರ್ವ ಕಾಲೇಜು, 1 ಪ್ರಥಮ ದರ್ಜೆ ಕಾಲೇಜು ಇದೆ. 6 ಅಂಗನವಾಡಿ ಕೇಂದ್ರವನ್ನು ಶನಿವಾರಸಂತೆ ಒಳಗೊಂಡಿದೆ. ಕಂಪ್ಯೂಟರ್ ಶಿಕ್ಷಣ ಕೇಂದ್ರ, ವಾಹನ ಚಾಲನಾ ತರಬೇತಿ ಕೇಂದ್ರ ಇಲ್ಲಿದೆ.
ಶ್ರೀಬೀರಲಿಂಗೇಶ್ವರ ದೇವಾಲಯ ಪ್ರಮುಖ
ಸರ್ವಧರ್ಮೀಯರನ್ನು ಒಗ್ಗೂಡಿಸುವ ಸಲುವಾಗಿಯೇ ನಿರ್ಮಾಣವಾದಂತಿರುವ ಶ್ರೀ ಬೀರಲಿಂಗೇಶ್ವರ ಪ್ರಬಲ ಭೈರವಿ ದೇವಾಲಯ ಇಲ್ಲಿದೆ. ದೇವಾಲಯ ವಾರ್ಷಿಕೋತ್ಸವಕ್ಕೆ ಗ್ರಾಮದ ಸರ್ವಧರ್ಮದವರು ತನುಮನ ಧನ ಸಹಾಯ ಮಾಡುವ ಮೂಲಕ ಎಲ್ಲರೂ ಪಾಲ್ಗೊಳ್ಳುತ್ತಾರೆ. ಗಣಪತಿ ದೇವಾಲಯ, ಊರೊಡೆಯ, ರಾಮಮಂದಿರ, ವಿಜಯ ವಿನಾಯಕ, ಮಾರಮ್ಮನ ಗುಡಿ, ಬಸವೇಶ್ವರ ದೇವಾಲಯ, ಚಾಮುಂಡಿ, ಗುಳಿಗ ಬನ ಇಲ್ಲಿದೆ.
ಕೃಷಿಯೇ ಪ್ರಧಾನ ಉದ್ಯೋಗ
ಹೆಚ್ಚಿನವರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಫಿ, ಕಾಳುಮೆಣಸು, ಅಡಕೆ, ಶುಂಠಿ, ಇನ್ನಿತರ ಬೆಳೆ ಬೆಳೆಯುತಿದ್ದಾರೆ.
ಕೆಲವರು ವ್ಯಾಪಾರ, ವ್ಯವಹಾರಗಳಲ್ಲಿ ವರ್ಕ್‌ಶಾಪ್, ಟೈಲರಿಂಗ್, ಆಟೋ, ಟ್ರಾವೆಲಿಂಗ್, ಗಾರೆ, ಕಾರ್ಪೆಂಟರ್, ಟಿಂಬರ್ ಇನ್ನಿತರ ಕೆಲಸ ಮಾಡುವ ಕಾರ್ಮಿಕರು ಇದ್ದಾರೆ.
ಮಾರುಕಟ್ಟೆ ಅವ್ಯವಸ್ಥೆ ಪ್ರತಿ ಶನಿವಾರ ಇಲ್ಲಿ ಸಂತೆ ನಡೆಯುತ್ತದೆ. ಆದರೆ ಮಳೆಗಾಲದಲ್ಲಿ ಇಲ್ಲಿನ ವ್ಯಾಪಾರಸ್ಥರು ಹಾಗೂ ಗ್ರಾಹಕರ ಗೋಳು ಹೇಳತೀರದು. ಮಳೆಗಾಲದಲ್ಲಿ ಕೊಳಚೆ ನೀರಿನಲ್ಲೇ ಕುಳಿತು ವ್ಯಾಪಾರ ಮಾಡಬೇಕಾಗಿದೆ.
ಶನಿವಾರಸಂತೆ ದೊಡ್ಡ ಹೋಬಳಿ ಕೇಂದ್ರವಾಗಿದೆ. ಆದರೆ ಅನುದಾನ ಬರುವುದು ಕಡಿಮೆಯಾಗಿರುವುದರಿಂದ ಹೆಚ್ಚು ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಶನಿವಾರಸಂತೆ ಸುತ್ತಲಿನ ಹಾಗೂ ಹಾಸನ ಜಿಲೆಯ ಅನೇಕ ಗ್ರಾಮಗಳಿಂದ ಇಲ್ಲಿಗೆ ವಿವಿಧ ವ್ಯಾಪಾರಕ್ಕೆ ಬರುತ್ತಾರೆ. ಅದರೆ ಇಲ್ಲಿನ ಅವ್ಯವಸ್ಥೆ ಬೇಸರ ತರಿಸಲಿದೆ. ಕೆಲ ಜನಪ್ರತಿನಿಧಿಗಳ ಇಚ್ಛಾಶಕ್ತಿಯಿಂದ ಶನಿವಾರಸಂತೆ ಹಿಂದುಳಿದಿದೆ. ಎಸ್.ಸಿ.ಶರತ್ ಶೇಖರ್ ಸದಸ್ಯ ಗ್ರಾ.ಪಂ. ಶನಿವಾರಸಂತೆ ಒಂದನೇ ವಾರ್ಡ್‌ನಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಸಾರ್ವಜನಿಕ ಶೌಚಗೃಹವನ್ನು ಸರಿಪಡಿಸಿ ಸಾರ್ವಜನಿಕರಿಗೆ ಬಳಕೆಗೆ ನೀಡಲಾಗುವುದು. ಅನೇಕ ಸರ್ಕಾರಿ ಕಚೇರಿಗಳು ಇರುವುದರಿಂದ ಇಲ್ಲಿಗೆ ಶೌಚಗೃಹಗಳ ಅವಶ್ಯಕತೆ ಇದೆ. ಮುಂದಿನ ಪಂಚಾಯಿತಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಶೌಚಗೃಹವನ್ನು ಸಾರ್ವಜನಿಕರ ಬಳಕೆಗೆ ನೀಡಲಾಗುವುದು. ಗೀತಾ ಹರೀಶ್ ಅಧ್ಯಕ್ಷೆ, ಗ್ರಾ.ಪಂ. ಶನಿವಾರಸಂತೆ ಚರಂಡಿ ಸ್ವಚ್ಛಗೊಳಿಸಬೇಕು. ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಿಸಿ ಸಾರ್ವಜನಿಕರಿಗೆ ಸೌಲಭ್ಯ ಸಿಗುವಂತಾಗಬೇಕು. ಶಾಲಾ, ಕಾಲೇಜು ಬಿಡುವ ಸಮಯದಲ್ಲಿ ರಸ್ತೆಯಲ್ಲಿ ಪೊಲೀಸ್ ಸಿಬ್ಬಂದಿ ಗಸ್ತು ತಿರುಗಬೇಕು. ಪುಂಡರ ಹಾವಳಿ ತಡೆಯಬೇಕು. ಜಲಜೀವನ ಮಿಷನ್ ಸಮಸ್ಯೆ ಬಗ್ಗೆ ಈಗಾಗಲೇ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಸರ್ದಾರ್ ಅಹಮ್ಮದ್ ಉಪಾಧ್ಯಕ್ಷ, ಗ್ರಾಮ ಪಂಚಾಯಿತಿ, ಶನಿವಾರಸಂತೆ ಶನಿವಾರಸಂತೆ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಲು ಎಲ್ಲ ಅರ್ಹತೆ ಹೊಂದಿದೆ. ಆದರೆ ಸಂಬಂಧಪಟ್ಟವರು ಇಚ್ಛಾಶಕ್ತಿ ಕೊರತೆಯಿಂದ ಹಿನ್ನಡೆಯಾಗಿದೆ. ಫೀ.ಮಾ.ಕಾರ್ಯಪ್ಪ ಅವರ ಹುಟ್ಟಿದ ಊರು ಬೇರೆ ಪಟ್ಟಣ ಆಗಿದ್ದರೆ ಈಗಾಗಲೇ ದೊಡ್ಡ ಸ್ಮಾರಕ ಮಾಡಿ ಅವರ ಜೀವನ ಚರಿತ್ರೆಯನ್ನು ಅಳವಡಿಕೆ ಮಾಡುತ್ತಿದ್ದರು. ಆದರೆ ಈ ಮನೆಯನ್ನು ಸಣ್ಣ ಗ್ರಂಥಾಲಯವಾಗಿ ಮಾಡಿ ಬಿಟ್ಟಿದ್ದಾರೆ. ಅವರ ಫೋಟೋ ಬಿಟ್ಟರೆ ಬೇರೇನೂ ಇಲ್ಲ. ಎಸ್.ಎನ್.ರಘು ಸದಸ್ಯ, ಗ್ರಾಮ ಪಂಚಾಯಿತಿ ಶನಿವಾರಸಂತೆ.