Bengaluru: ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿನ ಅವ್ಯವಸ್ಥೆಯ ಬಗ್ಗೆ ಕೆನಡಾದ ವ್ಲಾಗರ್ ಕ್ಯಾಲೆಬ್ ಫ್ರೈಸೆನ್ ಅವರ ವಿಡಿಯೋ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡು ಸ್ವಚ್ಛತೆ ಕಾರ್ಯ ಆರಂಭಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ರಾಜೇಂದ್ರ ಚೋಳನ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ˌ ಅನೇಕ ಬಾರಿ ಇಲ್ಲಿನ ಸಮಸ್ಯೆಯ ಬಗ್ಗೆ ದೂರು ನೀಡಿದರು ಸ್ಪಂದಿಸದ ಅಧಿಕಾರಿಗಳಿಗೆ ˌ ಈಗ ವಿದೇಶಿ ಪ್ರಜೆಯ ವಿಡಿಯೋದಿಂದ ಜ್ಞಾನೋದಯವಾಗಿದೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಭಾರತವು ಅಮೆರಿಕದ ಒಂದು ಕಾಳು ಜೋಳವನ್ನೂ ಖರೀದಿಸುವುದಿಲ್ಲ: ಯುಎಸ್ ವಾಣಿಜ್ಯ ಕಾರ್ಯದರ್ಶಿ ಲುಟ್ನಿಕ್| Howard Lutnick
ಬೆಂಗಳೂರಿನ ಹೃದಯದ ಭಾಗ ಎಂದೇ ಪ್ರಸಿದ್ದಿ ಪಡೆದಿರುವ ಮೆಜೆಸ್ಟಿಕ್ ಪ್ರದೇಶದಲ್ಲಿನ ಪಾದಚಾರಿ ಮಾರ್ಗಗಳಲ್ಲಿ ಉಂಟಾಗುವ ಭೀಕರ ಸ್ಥಿತಿಯ ವಿಡಿಯೋವೊಂದನ್ನು ಫ್ರೈಸೆನ್ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಮೆಜೆಸ್ಟಿಕ್ನಿಂದ ಸ್ಟಾರ್ಬಕ್ಸ್ಗೆ ಕೇವಲ 1.5 ಕಿಮೀ ಇದ್ದು, ಇಲ್ಲಿಗೆ ನಡೆದುಕೊಂಡು ಹೋಗಲು ಎಷ್ಟು ಕಷ್ಟ ಎಂಬುದನ್ನುಈ ವಿಡಿಯೋ ತೋರಿಸಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನಾಗರಿಕ ಸಂಸ್ಥೆಯು ಆ ಪ್ರದೇಶದಲ್ಲಿ ಸ್ವಚ್ಛತೆ ಕಾರ್ಯಾರಂಭ ಮಾಡಿದ್ದು, ಈ ವೇಳೆ ಬಿಬಿಎಂಪಿ ಆಯುಕ್ತ ಚೋಳನ್ ನಾಗರೀಕರೊಂದಿಗೆ ಸೇರಿ ಪಾದಚಾರಿ ಮಾರ್ಗಗಳನ್ನು ಗುಡಿಸಲು ಪ್ರಾರಂಭಿಸಿ, ಈ ವೇಳೆ ಅಲ್ಲಿಯ ಸಿಬ್ಬಂದಿಗಳೊಂದಿಗೆ ಕೂತು ಉಪಹಾರ ಸೇವಿಸಿದರು.
ಈ ಮೊದಲು ಈ ಸ್ಥಳದಲ್ಲಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಇಂದು ಕಸ, ಮೂತ್ರ, ಮುಳ್ಳುತಂತಿ ಇದ್ದ ಪ್ರದೇಶದಲ್ಲಿ ಎಲ್ಲರೂ ಕುಳಿತು ಊಟ ಮಾಡುತ್ತಿರುವುದು ರೋಮಾಂಚನಕಾರಿಯಾಗಿದೆ ಎಂದು ಸ್ಥಳಕ್ಕೆ ಆಗಮಿಸಿದ ವ್ಲಾಗರ್ ಫ್ರೈಸೆನ್ ತಮ್ಮ ಮತ್ತೊಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ಈ ವಿಡಿಯೋ ಎಲ್ಲೆಡೆ ಪ್ರಸಾರವಾಗುತ್ತಿದ್ದಂತೆಯೇ ನೆಟ್ಟಿಗರು ಬಿಬಿಎಂಪಿ ಆಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳೀಯ ನಿವಾಸಿಗಳು ವರ್ಷಗಳಿಂದ ದೂರು ನೀಡಿದರೂ ಅದಕ್ಕೆ ನಿರ್ಲಕ್ಷ್ಯ ಮಾಡಿದ್ದು, ಈಗ ವಿದೇಶಿಯರೊಬ್ಬ ದೂರನ್ನು ನೀಡಿದ ನಂತರ ನಾಗರಿಕ ಸಂಸ್ಥೆ ಕ್ರಮ ಕೈಗೊಂಡಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೋರ್ವ ದಿ ಸ್ಕಿನ್ ಡಾಕ್ಟರ್ ಎಂಬ ಹೆಸರಿನ X ಖಾತೆದಾರನೊಬ್ಬರು ಪ್ರತಿಕ್ರಿಯಿಸಿದ್ದು, ನಾವು ಇನ್ನೂ ವಸಾಹತುಶಾಹಿ ಆಳ್ವಿಕೆಯಲ್ಲಿದ್ದೇವಾ, ಇಲ್ಲಿನ ಕೆಲಸಗಳನ್ನು ಮಾಡುವಲ್ಲಿ ಭಾರತೀಯರ ಧ್ವನಿಗಿಂತ ಬಿಳಿಯ ವ್ಯಕ್ತಿಯ ವಿಡಿಯೋ ಹೆಚ್ಚಾಯಿತಾ? ಎಂದು ಪ್ರಶ್ನಿಸಿದ್ದಾರೆ.(ಏಜೆನ್ಸೀಸ್)