ಕಿಕ್ಕೇರಿ ಹೋಬಳಿಯ ಆನೆಗೊಳ ಆದಿಚುಂಚನಗರಿ ಪ್ರೌಢಶಾಲೆಯಲ್ಲಿ ಗುರುವಾರ ಜರುಗಿದ ಬಿಜಿಎಸ್ ಚಿಣ್ಣರ ಜಾಣರ ಜಗುಲಿ ಕಾರ್ಯಕ್ರಮವನ್ನು ಸಂಸ್ಥೆ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣೇಗೌಡ ಉದ್ಘಾಟಿಸಿದರು. ಬಲ್ಲೇನಹಳ್ಳಿ ಮಂಜುನಾಥ್, ಬಿ.ಎಸ್. ಮಂಜುನಾಥ್, ರಾಮೇಗೌಡ ಮತ್ತಿತರರಿದ್ದರು.  
ಜಿಲ್ಲೆ

ಮನಸೂರೆಗೊಂಡ ಚಿಣ್ಣರ ಜಾಣರ ಜಗುಲಿ

ಕಿಕ್ಕೇರಿ: ಹೋಬಳಿಯ ಅಂಕನಹಳ್ಳಿ ಗ್ರಾಮದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಯ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ 51ನೇ ವರ್ಷದ ಪಟ್ಟಾಭಿಷೇಕ ಅಂಗವಾಗಿ ಗುರುವಾರ ಆಯೋಜಿಸಿದ್ದ ಚಿಣ್ಣರ ಜಾಣರ ಜಗುಲಿ ಹರಟೆ ಕಾರ್ಯಕ್ರಮದಲ್ಲಿ ಗ್ರಾಮೀಣ ಮಕ್ಕಳ ವಾಕ್ ಚಾತುರ್ಯ, ಸತ್ತವರ ಬಳಿ ಹಳ್ಳಿಗರ ರೋದನ ನುಡಿ, ರಂಗಕುಣಿತ, ತಮಟೆ ಮೇಳದ ಮಕ್ಕಳ ಜಲಕ್ ಮನಸೊರೆಗೊಳಿಸಿತು.


ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಸಂಸ್ಥೆಯ ಹೇಮಗಿರಿ ಶಾಖಾಮಠದ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣೇಗೌಡ ಉದ್ಘಾಟಿಸಿ ಮಾತನಾಡಿ, ನಮ್ಮ ಸಂಸ್ಕೃತಿ ವಿಶ್ವದ ತಾಯಿ ಬೇರಿನಂತಿದ್ದು, ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ, ಸಂಸ್ಕೃತಿ ಕಲಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯಿಂದ ಇಂದಿನ ಯುವಪೀಳಿಗೆ ಬೀದಿಗೆ ಬೀಳುವಂತಾಗಿದೆ ಎಂದು ಬೇಸರಿಸಿದರು.
ಯುವಪೀಳಿಗೆಯ ಭವಿಷ್ಯ ಹಾಳು ಮಾಡುತ್ತಿರುವ ಮೊಬೈಲ್ ಆರೋಗ್ಯ, ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದೆ. ನಾವು ಧರಿಸುವ ಬಟ್ಟೆಗಳು ಅಸಹ್ಯಕರವಾಗಿದೆ. ನಡೆದಾಡುವ ಮಾತನಾಡುವ ಶೈಲಿ ಬದಲಾಗಿದೆ. ದೇಸಿ ಕ್ರೀಡೆ ಮಾಯವಾಗಿ ಮೊಬೈಲ್ ಗೇಮ್ ಆವರಿಸಿದೆ. ಅವಿಭಕ್ತ ಕುಟುಂಬ ಛಿದ್ರವಾಗಿ ವಿಭಕ್ತವಾಗಿದೆ. ಮನಸ್ಸು, ಕುಟುಂಬದಲ್ಲಿ ಅಶಾಂತಿ ಬೇರೂರಿ ಅತ್ಮಹತ್ಯೆಯಂತಹ ಪ್ರಕರಣ ಹೆಚ್ಚುತ್ತಿವೆ. ಭಾರತೀಯ ಸಂಸ್ಕೃತಿ ಉಳಿಸಲು ವಿದ್ಯಾರ್ಥಿಗಳನ್ನು ತಿದ್ದಿ ತೀಡುವ ಕೆಲಸ ಶಿಕ್ಷಣದ ಮೂಲಕವಾಗಲು ಚಿಣ್ಣರ ಜಾಣರ ಜಗುಲಿ ವೇದಿಕೆಯಾಗಲಿ ಎಂದರು.
ದೇಸಿ ಸಂಸ್ಕೃತಿಯಾದ ಗರಡಿ ಮನೆ, ಕ್ರೀಡೆ, ಆಚಾರ, ವಿಚಾರ, ಗೋವು, ಪರಿಸರ ಸಂರಕ್ಷಣೆ ಎಲ್ಲವೂ ಉಳಿದ್ದಲ್ಲಿ ಮಾತ್ರ ಭಾರತೀಯ ಸಂಸ್ಕೃತಿಯ ಪಾವಿತ್ರ್ಯ ಉಳಿಯಲಿದೆ. ಮಕ್ಕಳಿಗೆ ಸಂಸ್ಕಾರದ ಸಂಸ್ಕೃತಿಯ ಬೇರು ಗಟ್ಟಿಗೊಳಿಸಿ. ಆಧುನಿಕ ಜಾಗತಿಕ ಮಟ್ಟದಲ್ಲಿ ಬಲು ಎಚ್ಚರಿಕೆಯಿಂದ ಅವಶ್ಯಕತೆ ಇರುವ ಆಚರಣೆಗಳನ್ನು ಮಾತ್ರ ಪಾಲಿಸಿ. ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಓದಿಗಿಂತ ನೈತಿಕ ಶಿಕ್ಷಣ, ಪಂಚತಂತ್ರ ಕಥೆ ತಿಳಿಸಿದ್ದಲ್ಲಿ ಮಾತ್ರ ದೇಸಿ ಸಂಸ್ಕೃತಿ ಸಮೃದ್ಧಿಯಾಗಿ ನಾಡು ಸುಭದ್ರವಾಗಿದೆ ಎಂದು ತಿಳಿ ಹೇಳಿದರು.
ಸಂಸ್ಕೃತಿ ಅಂದು-ಇಂದು ಚರ್ಚಾ ವಿಷಯದಲ್ಲಿ ಅಂದಿನ ಸಂಸ್ಕೃತಿ ಪರವಾಗಿ ವಿದ್ಯಾರ್ಥಿಗಳಾದ ಅಖಿಲಾ, ಮೇಘನಾ, ವಿನೋದಿತಾ, ಉಮಾ ಹಾಗೂ ಇಂದಿನ ಸಂಸ್ಕೃತಿ ಪರವಾಗಿ ಹೇಮಲತಾ, ಪುಷ್ಪಲತಾ, ವರ್ಷಾ, ಪ್ರಿಯಾಂಕಾ ಪಟಪಟನೆ ಹರಳು ಉರಿದಂತೆ ಮಾತಿನ ಚಟಾಕಿ ಹಾರಿಸಿದರು.
ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಮಕ್ಕಳಿಗೆ ಹುರಿದುಂಬಿಸಿ ಚರ್ಚೆಗೆ ಉತ್ತೇಜಿಸಿದರು.
ಹಳ್ಳಿ ಸೊಗಡಿನ ಮರದ ಯಂತ್ರದಲ್ಲಿ ಶ್ಯಾವಿಗೆ ಒತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಪ್ಪಟ ಗ್ರಾಮೀಣ ಸೊಗಡಿನಲ್ಲಿ ಶಿಕ್ಷಕರು ವೇದಿಕೆ ನಿರ್ಮಿಸಿದ್ದರು. ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪಾದುಕೆಗೆ ಪೂಜೆ ಸಲ್ಲಿಸಿ ಪಾದಪೂಜೆ ಕುರಿತು ಮನವರಿಕೆ ಮಾಡಲಾಯಿತು.
ಮಕ್ಕಳು ಜಾನಪದ ಕಲೆಯಾದ ರಂಗಕುಣಿತ, ತಮಟೆವಾದ್ಯ ನುಡಿಸುವ ಮೂಲಕ ನಿಬ್ಬೆರುಗುಗೊಳಿಸಿದರು. ವಿವಿಧ ಸಾಂಸ್ಕೃತಿಕ ನೃತ್ಯಗಳ ಮೂಲಕ ಗಣ್ಯರನ್ನು ವಿದ್ಯಾರ್ಥಿಗಳು ಸ್ವಾಗತಿಸಿದರು.

ನಿವೃತ್ತ ಶಿಕ್ಷಕ ರಾಮೇಗೌಡ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ನಿರ್ದೇಶಕ ಬಿ.ಎಸ್. ಮಂಜುನಾಥ್, ಪಾಲಕರು, ಶಿಕ್ಷಕ ವೃಂದ ಹಾಜರಿದ್ದರು.