ಯಳಂದೂರು: ತಾಲೂಕಿನ ಮಲ್ಲಿಗೆಹಳ್ಳಿ ಗ್ರಾಮದಿಂದ ಕೆಸ್ತೂರು ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಗುರುವಾರ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ವಾಹನ ಪಲ್ಟಿ ಹೊಡೆದು ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
ತಾಲೂಕಿನ ಮಲ್ಲಿಗೆಹಳ್ಳಿ ಗ್ರಾಮದ ಉಪ್ಪಾರ ಬಡಾವಣೆ ನಿವಾಸಿ ಶ್ರೀಕಂಠಮೂರ್ತಿ ಅವರ ಪುತ್ರ ಯಳಂದೂರು ಮಲ್ಲಿಕಾರ್ಜುನ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿ.ಕಾಂನಲ್ಲಿ ವ್ಯಾಸಂಗ ಮಾಡುತ್ತಿದ್ದ ಶಿವು(19) ಮೃತ ವಿದ್ಯಾರ್ಥಿ.
ಎಂದಿನಂತೆ ಯಳಂದೂರಿಗೆ ಗ್ರಾಮದಿಂದ ಬೊಲೆರೋ ವಾಹನದಲ್ಲಿ 10 ಜನರು ಗುರುವಾರ ಬೆಳಗ್ಗೆ 11 ಗಂಟೆಯಲ್ಲಿ ಪ್ರಯಾಣ ಬೆಳೆಸಿದ್ದರು. ಮಲ್ಲಿಗೆಹಳ್ಳಿ ಗ್ರಾಮದಿಂದ ಕೆಸ್ತೂರು ಗ್ರಾಮಕ್ಕೆ ಹೋಗುವ ಮಾರ್ಗಮಧ್ಯದಲ್ಲಿರುವ ಭೂತಯ್ಯನ ಕಟ್ಟೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ವಾಹನದಲ್ಲಿದ್ದ ಮಲ್ಲಿಗೆಹಳ್ಳಿ ಗ್ರಾಮದ ಅರ್ಜುನ್, ಪುನೀತ್, ಗಿರೀಶ್, ಮಹದೇವಪ್ರಸಾದ್, ಶ್ರೀನಿವಾಸ್, ಅಭಿ, ಮನೋಜ್, ಜೀವನ್ ಸೇರಿದಂತೆ 10 ಯುವಕರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತಕ್ಷಣ ಯಳಂದೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ 7 ಜನರನ್ನು ಚಾಮರಾಜನಗರಕ್ಕೆ ಕಳುಹಿಸಲಾಯಿತು. ಮೂವರನ್ನು ಮೈಸೂರಿಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಶಿವು ಮೃತಪಟ್ಟಿದ್ದಾನೆ.
ಈ ಸಂಬಂಧ ಯಳಂದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಅಪಘಾತಕ್ಕಿಡಾದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.