ವಿಜಯಪುರ: ನಾವು ಕಲಿತ ಶಿಕ್ಷಣಕ್ಕೆ ಬೆಲೆ ಬರಬೇಕಾದರೆ ಅದು ಸಂಸ್ಕಾರದಿಂದ ಕೂಡಿರಬೇಕು. ಶಿಕ್ಷಣ ಎಲ್ಲರೂ ಪಡೆಯುತ್ತಾರೆ. ಆದರೆ ಸಂಸ್ಕಾರ ಎಲ್ಲರೂ ಪಡೆದಿರುವುದಿಲ್ಲ ಎಂದು ಮಖಣಾಪುರ ಗುರುಪೀಠದ ಸೋಮೇಶ್ವರ ಸ್ವಾಮೀಜಿ ಹೇಳಿದರು.
ವಿಜಯಪುರ ತಾಲೂಕಿನ ಕನ್ನೂರಿನ ಶಾಂತಿ ಕುಟೀರ ಆಶ್ರಮದಲ್ಲಿ ಶಾಂತಿ ಕುಟೀರ ಟ್ರಸ್ಟ್, ಭಾರತೀಯ ಸುರಾಜ್ಯ ಸಂಸ್ಥೆ ಹಾಗೂ ಸಂಡೂರಿನ ಶ್ರೀಶೈಲೇಶ್ವರ ವಿದ್ಯಾಕೇಂದ್ರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಉಚಿತ ಬೇಸಿಗೆ ಶಿಬಿರ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
ಕನ್ನೂರಿನ ಸುತ್ತಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಸಂಸ್ಕಾರ ನೀಡುವ ಏಕೈಕ ಬೇಸಿಗೆ ಶಿಬಿರ ಇದಾಗಿದ್ದು, ಮಕ್ಕಳು ಸಂಸ್ಕಾರಯುತ, ಚಾರಿತ್ರ್ಛ್ಯವಂತರಾಗಬೇಕು ಎಂಬ ಸಮರ್ಥ ಸದ್ಗುರು ಗಣಪತರಾವ್ ಮಹಾರಾಜರ ಆಶಯದಂತೆ ನಡೆಯುವ ಈ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು ಭಾಗ್ಯವಂತರು. ಇಲ್ಲಿ ಆಧ್ಯಾತ್ಮಿಕ ಮತ್ತು ಸಂಸ್ಕಾರಯುತ ಕಲಿಕೆಯೊಂದಿಗೆ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು.
ಶ್ರೀ ಸಿದ್ಧೇಶ್ವರ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಡಾ. ಎಚ್. ವೆಂಕಟೇಶ ಶಿಬಿರ ಉದ್ಘಾಟಿಸಿ ಮಾತನಾಡಿ, ಸಂಸ್ಕಾರಹೀನ ಶಿಕ್ಷಣ ಸಮಾಜಘಾತಕ. ಸದ್ಗುಣಗಳು ನಮ್ಮಲ್ಲಿ ಒಡಮೂಡಬೇಕಾದರೆ ಇಂತಹ ಶಿಬಿರಗಳಿಂದ ಮಾತ್ರ ಸಾಧ್ಯ. ಗುರು ಸಾನ್ನಿಧ್ಯದಲ್ಲಿ ಒಂದು ತಿಂಗಳ ಕಾಲ ನಡೆಯುವ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಎಲ್ಲರೂ ಪಡೆದು ಜೀವನದಲ್ಲಿ ಉತ್ತಮ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಸಂಡೂರಿನ ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ಆಡಳಿತಾಧಿಕಾರಿ ಕುಮಾರ ಎಸ್. ನಾನಾವಟೆ ಪ್ರಾಸ್ತಾವಿಕವಾಗಿ ಮಾತನಾಡಿ ಶಾಂತಿಕುಟೀರದಲ್ಲಿ 2002ರಿಂದ ಆರಂಭವಾದ ಉಚಿತ ಶಿಬಿರ ಇಂದಿಗೆ 22 ವರ್ಷ ಪೂರ್ಣಗೊಳಿಸಿ 23ನೇ ವರ್ಷಕ್ಕೆ ಕಾಲಿಟ್ಟಿದೆ. ಇದುವರೆಗೆ ಇಲ್ಲಿಯ ಕಲಿತ ವಿದ್ಯಾರ್ಥಿಗಳು ದೇಶದ ಮೂಲೆ ಮೂಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಶಿಬಿರದಲ್ಲಿ ಪಾಲ್ಗೊಳ್ಳುವ 5ನೇ ತರಗತಿಯಿಂದ 10ನೇ ತರಗತಿಯ ವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಇದ್ದು, ಪಠ್ಯಗಳ ಜೊತೆಗೆ ಪ್ರಿಂಟ್‌ಹ್ಯಾಂಡ್ ರೈಟಿಂಗ್, ಅಬಕಾಸ್, ವೇದಿಕ್ ಗಣಿತ ಮತ್ತು ಆಟೋಟಗಳನ್ನು ಮಕ್ಕಳಿಗೆ ಕಲಿಸುವುದರ ಜೊತೆಗೆ ಪ್ರಾರ್ಥನೆ, ಧ್ಯಾನ, ಶ್ರಮದಾನದಂತಹ ಸೇವೆಗಳಿದ್ದು ಮಕ್ಕಳು ಶಿಬಿರದ ಸೌಲಭ್ಯ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಅಲ್ಲದೇ, ಭಾರತೀಯ ಸುರಾಜ್ಯ ಸಂಸ್ಥೆಯಡಿ ಸುರಾಜ್ಯ ವಿದ್ಯಾ ವಿಕಾಸ್ ಯೋಜನೆಯಡಿ ಈ ಭಾಗದ ಸರ್ಕಾರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೂರು ತಿಂಗಳ ಕಾಲ ವಿಷಯ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಬೋಧನೆ ಹಾಗೂ ಮಾರ್ಗದರ್ಶನವನ್ನು ಉಚಿತವಾಗಿ ನೀಡಿ, ಜೊತೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಪಾಸಿಂಗ್ ಪ್ಯಾಕೇಜ್ ಮತ್ತು ಸ್ಕೋರಿಂಗ್ ಪ್ಯಾಕೇಜ್ ಕೊಡಲಾಗಿದ್ದು ಅವರಲ್ಲಿ ಆತ್ಮವಿಶ್ವಾಸ ವೃದ್ಧಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಕನ್ನೂರ ಶಾಂತಿ ಕುಟೀರದ ಅಧ್ಯಕ್ಷ ಶ್ರೀಕೃಷ್ಣ ಗುರೂಜಿ ಕಾರ್ಯಕ್ರಮ ನಿರ್ವಹಿಸಿದರು.
ಶಾಂತಿ ಕುಟೀರ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಹೇತಿ, ಭಾರತೀಯ ಸುರಾಜ್ಯ ಸಂಸ್ಥೆ ಅಧ್ಯಕ್ಷ ಬಿ.ಬಿ. ಪೂಜಾರ, ಸತೀಶ ತಿಕೋಟಿ, ಗುರುಮನೆತನದ ಹಿರಿಯರಾದ ರಮೇಶ ಕನ್ನೂರ, ಶ್ರೀನಿವಾಸ್ ಕುಲಕರ್ಣಿ, ರಾಮಾನಂದ ಕನ್ನೂರ ಹಾಗೂ ಡೋಮನಾಳ, ಡೋಮನಾಳ ತಂಡಾ, ಕನ್ನೂರ, ಕನ್ನೂರ ದರ್ಗಾ ತಾಂಡಾ, ತಿಡಗುಂದಿ, ಮಖಣಾಪುರ, ಮಖಣಾಪುರ ತಾಂಡಾ, ಬೊಮ್ಮನಹಳ್ಳಿ, ಮದಾಸನಾಳ, ಕೊಟ್ನಾಳ ಗ್ರಾಮದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.