ನರಗುಂದ: ಗಣಿ, ಭೂವಿಜ್ಞಾನ ಇಲಾಖೆ ಸಚಿವರಾಗಿದ್ದಾಗ ಶಾಸಕ ಸಿ.ಸಿ. ಪಾಟೀಲ ಅವರು ಮಲಪ್ರಭಾ ನದಿಯ ಒಡಲು ಬಗೆದಿದ್ದಾರೆ.ಹಿಂಬಾಲಕರಿಗೆ ಅಕ್ರಮ ಮರಳುಗಾರಿಕೆಗೆ ಅವಕಾಶ ಮಾಡಿಕೊಟ್ಟು ಭ್ರಷ್ಟಾಚಾರ ಎಸಗಿದ್ದಾರೆ. ಆದರೀಗ ನನ್ನ ಹಾಗೂ ನನ್ನಿಬ್ಬರು ಮಕ್ಕಳ ವಿರುದ್ಧ ‘ಅಘೋಷಿತ ಶಾಸಕರು’ ಪದ ಬಳಿಸಿರುವುದು ಖಂಡನೀಯ ಎಂದು ಮಾಜಿ ಶಾಸಕ ಬಿ.ಆರ್. ಯಾವಗಲ್ ವಾಗ್ದಾಳಿ ನಡೆಸಿದರು.
ಪಟ್ಟಣದ ಮಲಪ್ರಭಾ ಕೋಮಲ್ ಆಯಿಲ್ ಮಿಲ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಸಿ. ಪಾಟೀಲರ ಹಿರಿಯ ಪುತ್ರ ವಿಶೇಷ ಕರ್ತವ್ಯಾಧಿಕಾರಿಗಳಂತೆ, ಅವರ ಪಿಎ, ಇನ್ನಿಬ್ಬರು ಮಕ್ಕಳು ಸೇರಿ ಒಟ್ಟು 5 ಜನರು ತಮ್ಮ ಅಧಿಕಾರದ ಅವಧಿಯಲ್ಲಿ ಏನೇನು ಮಾಡಿದ್ದಾರೆ ಎಂಬುದು ಮತಕ್ಷೇತ್ರದ ಜನರಿಗೆ ಗೊತ್ತಿದೆ. ನಿಮ್ಮ ಮಕ್ಕಳು ಅಧಿಕೃತ ಸರ್ಕಾರಿ ಕಾರ್ಯಕ್ರಮಗಳ ಉದ್ಘಾಟನೆ, ಕಾಮಗಾರಿಗಳ ಪರಿಶೀಲನೆ ಮಾಡಿದ್ದಾರೆ. ಸಾಲದೆಂಬಂತೆ ಸರ್ಕಾರಿ ಅಧಿಕಾರಿಗಳ ಮೇಲೆ ದಬ್ಬಾಳಿಕೆ, ದೌರ್ಜನ್ಯವನ್ನೂ ನಡೆಸಿದ್ದಾರೆ. ಆಗ ಶಾಸಕರ ನಡಾವಳಿ ಎಲ್ಲಿ ಹೋಗಿತ್ತು ಎಂದು ಯಾವಗಲ್ ಪ್ರಶ್ನಿಸಿದರು.
ನಾವು ಸಾರ್ವಜನಿಕ ಸೇವೆಯಲ್ಲಿದ್ದೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಕೆಲವರು ಬಂದು ಶಿಫಾರಸು ಪತ್ರ ಪಡೆದು ಕೆಲಸ ಮಾಡಿಸಿಕೊಂಡಿರಬಹುದು. ಆದರೆ, ನೀವು ಶಾಸಕರಾಗಿ ಏನ್ ಕೆಲ್ಸಾ ಮಾಡುತ್ತಿದ್ದೀರಿ. ಅಧಿಕಾರಿಗಳ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಸವಾಲು ಹಾಕಿದರು.
ನನಗೆ ಟ್ರಾನ್ಸ್‌ಫರ್ ಮಾಡಿಸುವುದರಲ್ಲಿ ಆಸಕ್ತಿಯೇ ಇಲ್ಲ. ಪುರಸಭೆಯ ನೂತನ ಕಟ್ಟಡ ನಿರ್ಮಾಣ ಅರ್ಧಕ್ಕೆ ನಿಂತಿದೆ. ಬಡವರಿಗೆ ಆಶ್ರಯ ಮನೆ ನಿರ್ಮಿಸಿಕೊಡದೆ ದ್ರೋಹ ಬಗೆದಿದ್ದೀರಿ. ಜಿಟಿಟಿಸಿ, ಇಂಜಿನಿಯರಿಂಗ್ ಕಾಲೇಜ್‌ಗೆ ಮೂಲಸೌಕರ್ಯ, ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಿಕೊಟ್ಟಿಲ್ಲ. ನಿಮ್ಮ ಅಭಿವೃದ್ಧಿ ಕಾರ್ಯಗಳು ಇದೇನಾ ಎಂದು ಪ್ರಶ್ನಿಸಿದರು.