ಬೆಳಗಾವಿ: ಇಂದಿನ ಉನ್ನತ ಶಿಕ್ಷಣದಲ್ಲಿ ಡಿಜಿಟಲ್ ತಂತ್ರಜ್ಞಾನದ ಜತೆಗೆ ಹೊಸ ಆವಿಷ್ಕಾರಗಳ ಬಗ್ಗೆ ತಿಳಿದುಕೊಳ್ಳುವ ನವೀನತೆಗೂ ವಿದ್ಯಾರ್ಥಿಗಳು ಹೆಚ್ಚು ಮಹತ್ವ ಕೊಡಬೇಕು ಎಂದು ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ತಿಳಿಸಿದರು.
ನಗರದ ಕರ್ನಾಟಕ ಕಾನೂನು ಸಂದ ಪ್ಲಾಟಿನಂ ಜ್ಯುಬಿಲಿ ಕಟ್ಟಡದ ಕೆ.ಕೆ.ವೇಣುಗೋಪಾಲ್ ಸಭಾಭವನದಲ್ಲಿ ನಡೆದ ಕೆಎಲ್ಎಸ್ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಬಿಬಿಎ ಮತ್ತು ಬಿಸಿಎ ವಿಭಾಗಗಳ ಬೆಳ್ಳಿ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾನೂನು ಸಂದ ಅನಂತ ಮಂಡಗಿ ಮಾತನಾಡಿ, 1996ರಲ್ಲಿ ಪ್ರಾರಂಭವಾದ ಬಿಬಿಎ ವಿಭಾಗ ಮತ್ತು 1999ರಲ್ಲಿ ಆರಂಭಗೊಂಡ ಬಿಸಿಎ ವಿಭಾಗವೂ ಇಂದಿಗೆ 25 ವರ್ಷಗಳನ್ನು ಪೂರೈಸಿದೆ. ಉದ್ಯಮ ಏಕೀಕರಣ, ಪ್ರಾಯೋಗಿಕ ಕಲಿಕೆ ಮತ್ತು ತಂತ್ರಜ್ಞಾನ ಉದ್ಯಮಶೀಲತೆಯಲ್ಲಿ ವಿದ್ಯಾರ್ಥಿಗಳ ಯಶಸ್ಸಿಗೆ ಪ್ರೋತ್ಸಾಹಿಸುತ್ತ ಬಂದಿದ್ದೇವೆ ಎಂದು ವಿವರಿಸಿದದರು.
ವಿಜಿಲೆನ್ಸ್ ಹೆಚ್ಚುವರಿ ಆಯುಕ್ತ ಡಾ. ಸಾಗರ ದೇಶಪಾಂಡೆ, ಕರ್ನಾಟಕ ಕಾನೂನು ಸಂದ ಕಾರ್ಯದರ್ಶಿ ಪಿ.ಎಸ್. ಸಾವ್ಕರ್, ಇತರರಿದ್ದರು.
ಬಿಸಿಎ ವಿಭಾಗದ ಹಳೇ ವಿದ್ಯಾರ್ಥಿ ಮತ್ತು ಉದ್ಯಮಿ ಅಮಯ್ ಕಡ್ಲೆ ಅವರನ್ನು ಸನ್ಮಾನಿಸಲಾಯಿತು. ಹೊಸದಾಗಿ ಸ್ಥಾಪಿಸಲಾದ ಬೆಳ್ಳಿ ಮಹೋತ್ಸವ ಸೆಮಿನಾರ್ ಹಾಲ್, ಉದ್ಯೋಗ ನಿಯೋಜನೆ ಕೋಶ ಹಾಗೂ 25 ವರ್ಷದ ಸಾಧನೆಯನ್ನೊಳಗೊಂಡ ಸ್ಮರಣೆಯನ್ನು ಬಿಡುಗಡೆಗೊಳಿಸಲಾಯಿತು.