ಕಾರಟಗಿ: ಅಪ್ರತಿಮ ಪರಾಕ್ರಮ, ನಿರ್ಭೀತ ನಡೆ ಹಾಗೂ ಜನಪರ ಕಾರ್ಯಗಳಿಂದ ಮದಕರಿ ನಾಯಕರು ಚಿತ್ರದುರ್ಗ ಸಂಸ್ಥಾನದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ್ದರು ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ ಹೇಳಿದರು.
ಇದನ್ನೂ ಓದಿ:ಅಪ್ರತಿಮ ಪರಾಕ್ರಮಿ ಮದಕರಿ ನಾಯಕ
ಪಟ್ಟಣದ ನವಲಿ ರಸ್ತೆಯಲ್ಲಿನ ತಾಲೂಕು ವಾಲ್ಮೀಕಿ ಮಹಾಸಭಾದ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವೀರ ಮದಕರಿ ನಾಯಕರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಏಳು ಸುತ್ತಿನ ಕೋಟೆ ಆಳಿದ ಮದಕರಿ ನಾಯಕ ಸ್ವಾಭಿಮಾನ, ಸಾಹಸ ಹಾಗೂ ವೀರ ಪರಂಪರೆಯ ಪ್ರತೀಕವಾಗಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ಸಂಸ್ಥಾನವನ್ನು ಬಲಪಡಿಸಿ ಜನಪರ ಯೋಜನೆಗಳ ಮೂಲಕ ನಾಡನ್ನು ಸುಭಿಕ್ಷೆಯಿಂದ ಮುನ್ನಡೆಸಿದ್ದರು. ಚಿತ್ರದುರ್ಗದ ಕೋಟೆ ಸುತ್ತಲು ಕೆರೆ-ಕಟ್ಟೆ, ಮಠ ಮಂದಿರಗಳನ್ನು ನಿರ್ಮಿಸಿ ಧಾರ್ಮಿಕ ಸಹಿಷ್ಣುತೆ ಮೆರೆದಿದ್ದರು. ಗುಲಾಮಗಿರಿ ವಿರುದ್ಧ ಹೋರಾಡುತ್ತಲೇ ಸಮಾಜಮುಖಿ ಕೆಲಸ ಮಾಡಿದ್ದರು ಎಂದು ತಿಳಿಸಿದರು.
ವಾಲ್ಮೀಕಿ ಮಹಾಸಭಾದ ತಾಲೂಕು ಪ್ರಧಾನ ಕಾರ್ಯದರ್ಶಿ ಸೋಮನಾಥ್ ಹೆಬ್ಬಡದ, ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಶಿವರೆಡ್ಡಿ ನಾಯಕ, ಪುರಸಭೆ ನಾಮನಿರ್ದೇಶಿತ ಸದಸ್ಯ ಸೋಮಶೇಖರ, ಮಹಾಸಭಾದ ತಾಲೂಕಾಧ್ಯಕ್ಷ ಗಿರಿಯಪ್ಪ ಬೂದಿ, ಗ್ರಾಪಂ ಅಧ್ಯಕ್ಷ ವೀರೇಶ ಮೈಲಾಪುರ, ಉಪನ್ಯಾಸಕ ಡಾ.ಹನುಮಂತಪ್ಪ ಚಂದಲಾಪುರ, ಪ್ರಮುಖರಾದ ದೇವರಾಜ ಜೂರಟಗಿ, ದುರುಗೇಶ ಪ್ಯಾಟ್ಯಾಳ, ಶರಣಪ್ಪ ಚಾಗಿ, ರಮೇಶ ನಾಡಿಗೇರ್, ಹನುಮಂತ ಕರಿಯಣ್ಣನವರ, ವೆಂಕೋಬ ನಾಯಕ ಚಳ್ಳೂರು ಇತರರಿದ್ದರು.