ಮೈಸೂರು: ಸ್ನಾತಕೋತ್ತರ ಪದವಿ ಕೋರ್ಸ್‌ನ ರಾಜ್ಯ ಮಟ್ಟದ ಕೇಂದ್ರಿಕೃತ ಪ್ರವೇಶ ಪರೀಕ್ಷೆಗೆ ವಿಶ್ವವಿದ್ಯಾಲಯ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಎಐಡಿಎಸ್‌ಒ ವತಿಯಿಂದ ಶುಕ್ರವಾರ ಮೈಸೂರು ವಿವಿ ವಿ.ಆರ್.ಶೈಲಜಾ ಅವರಿಗೆ ಮನವಿ ಸಲ್ಲಿಸಲಾಯಿತು.
ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ ನಡೆಸುವ ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಕೌನ್ಸಿಲ್ ರಾಜ್ಯ ಸರ್ಕಾರದ ಮುಂದಿಟ್ಟಿದೆ.
ಈ ಪ್ರವೇಶ ಪರೀಕ್ಷೆ ಜಾರಿಯಾದಲ್ಲಿ ಈಗಾಗಲೇ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿರುವ ಉನ್ನತ ಶಿಕ್ಷಣದ ಪ್ರವೇಶಾತಿಯಿಂದ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳನ್ನು ದೂರ ತಳ್ಳಲಿದೆ. ಇದರಿಂದ ಉನ್ನತ ಶಿಕ್ಷಣದ ಕನಸಿನ ಮೇಲೆ ಪ್ರಹಾರವೆಸಗಿದಂತಾಗುತ್ತದೆ. ಅಲ್ಲದೆ ಉನ್ನತ ಶಿಕ್ಷಣದ ಪ್ರವೇಶಕ್ಕೆ ತಡೆಯೊಡ್ಡುವ ಹುನ್ನಾರ ಇದಾಗಿದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಎಲ್ಲ ಪ್ರವೇಶ ಪರೀಕ್ಷೆಗಳಲ್ಲಿ ತಾಂಡವವಾಡುತ್ತಿರುವ ಕೋಚಿಂಗ್ ಲಾಬಿಗಳಿಗೆ ಇನ್ನೊಂದು ಮಣೆ ಹಾಕಿದಂತಾಗುತ್ತದೆ. ಉನ್ನತ ಶಿಕ್ಷಣದ ಮೂಲ ಆಶಯವಾಗಿರುವ ವಿಶ್ವವಿದ್ಯಾಲಯಗಳ ಮೂಲ ಹಕ್ಕಾದ ಸ್ವಾಯತ್ತತೆಗೆ ಇದು ಕೊಡಲಿ ಪೆಟ್ಟು ನೀಡುತ್ತದೆ.
ಆದ್ದರಿಂದ ಕೂಡಲೇ ಈ ಪ್ರಸ್ತಾವನೆಯನ್ನು ಕೈಬಿಟ್ಟು ವಿಶ್ವವಿದ್ಯಾಲಯಗಳ ಮಟ್ಟದಲ್ಲೇ ಪದವಿ ಅಂಕಗಳನ್ನಾದರಿಸಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ನೀಡಬೇಕೆಂದು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ, ಉಪಾಧ್ಯಕ್ಷ ನಿತಿನ್ ಇತರರಿದ್ದರು