ಮಂಗಳೂರು ಕರ‌್ಹಾಡ ಬ್ರಾಹ್ಮಣ ಸಮಾಜ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವ ಸಂಭ್ರಮ ಪ್ರಯುಕ್ತ ಏಕರೂಪ ಸಮಾನ ನಾಗರಿಕ ಸಂಹಿತೆ ಬಗ್ಗೆ ವಕೀಲ ನಂದಕಿಶೋರ್ ಉಪನ್ಯಾಸ ನೀಡಿದರು. ಸಂಘದ ಮಾಜಿ ಅಧ್ಯಕ್ಷ ಎಂ.ಪುರುಷೋತ್ತಮ ಭಟ್, ಮಂಗಳೂರು ಕರ‌್ಹಾಡ ಬ್ರಾಹ್ಮಣ ಸಮಾಜ ಸಂಘದ ಅಧ್ಯಕ್ಷ ಅನಂತಶಯನ ಭಟ್ ಮೊದಲಾದವರಿದ್ದರು. 
ಜಿಲ್ಲೆ

ಏಕರೂಪ ನಾಗರಿಕ ಸಂಹಿತೆ ತಿಳಿವಳಿಕೆ ಅಗತ್ಯ, ಮಾಹಿತಿ ಕಾರ್ಯಕ್ರಮದಲ್ಲಿ ವಕೀಲ ನಂದಕಿಶೋರ್ ಆಶಯ

ಮಂಗಳೂರು: ದೇಶದಲ್ಲಿ ಧರ್ಮಾಧಾರಿತ ನಾಗರಿಕ ಸಂಹಿತೆ ಬದಲಾಗಿ ಏಕರೂಪ ನಾಗರಿಕ ಸಂಹಿತೆ ಅಗತ್ಯವಾಗಿ ಜಾರಿಗೆ ಬರಬೇಕು. ಪ್ರತಿಯೊಬ್ಬರೂ ಈ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡು ಅನುಷ್ಠಾನಕ್ಕೆ ಬೆಂಬಲ ನೀಡಬೇಕು ಎಂದು ವಕೀಲ ನಂದಕಿಶೋರ್ ಹೇಳಿದರು.

ಮಂಗಳೂರು ಕರ‌್ಹಾಡ ಬ್ರಾಹ್ಮಣ ಸಮಾಜ ಸಂಘ ವತಿಯಿಂದ ಮಂಗಳವಾರ ಸ್ವಾತಂತ್ರ್ಯೋತ್ಸವ ಸಂಭ್ರಮ ಪ್ರಯುಕ್ತ ಏಕರೂಪ ಸಮಾನ ನಾಗರಿಕ ಸಂಹಿತೆ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಏಕರೂಪ ನಾಗರಿಕ ಸಂಹಿತೆ ಎಂಬುದು ಯಾವುದೇ ಧರ್ಮದ ವಿರುದ್ಧ ಅಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಬ್ರಿಟಿಷ್ ಕಾಲದ ಕಾನೂನುಗಳಲ್ಲಿ ಬದಲಾವಣೆ ಅನಿವಾರ್ಯ. ಪ್ರಸ್ತುತ ಮುಸ್ಲಿಂ ಸಮುದಾಯದಲ್ಲಿ ಜಾರಿಯಲ್ಲಿರುವ ಷರೀಯತ್ ಕಾನೂನಿನಲ್ಲೇ ಆ ಸಮುದಾಯದ ಎಲ್ಲರಿಗೂ ಸಮಾನವಾದ ಹಕ್ಕುಗಳನ್ನು, ಕಾನೂನಿನ ಸೌಲಭ್ಯ ಪಡೆದುಕೊಳ್ಳಲು ಅವಕಾಶ ಇಲ್ಲ. ದೇಶದ ಸಮಗ್ರ ನಾಗರಿಕರ ಪರವಾಗಿ ಈ ಏಕರೂಪ ನಾಗರಿಕ ಕಾನೂನು ರೂಪುಗೊಳ್ಳಲಿದ್ದು, ರಾಜಕೀಯ ಕಾರಣಕ್ಕಾಗಿ ಅದನ್ನು ವಿರೋಧ ಮಾಡದೆ ಅದರರಿಂದಾಗುವ ಒಳಿತನ್ನು ಅರಿತುಕೊಂಡು ಬೆಂಬಲ ನೀಡಬೇಕು ಎಂದು ಹೇಳಿದರು.

ಇತ್ತೀಚೆಗೆ ನಿಧನರಾದ ಸಂಘದ ಗೌರವಾಧ್ಯಕ್ಷ ದಿ.ಅಂಗ್ರಾಜೆ ನರಸಿಂಹ ಭಟ್ ಭಾವಚಿತ್ರವನ್ನು ಅವರ ಪತ್ನಿ ಶೀಲಾ ಎನ್.ಭಟ್ ಅನಾವರಣಗೊಳಿಸಿದರು. ಸಂಘದ ಮಾಜಿ ಅಧ್ಯಕ್ಷ ಎಂ.ಪುರುಷೋತ್ತಮ ಭಟ್ ದಿ.ನರಸಿಂಹ ಭಟ್ ಸಂಸ್ಮರಣೆ ನಡೆಸಿಕೊಟ್ಟರು. ಸಂಸ್ಥೆಯ ನೂತನ ಗೌರವಾಧ್ಯಕ್ಷ ವಿದ್ಯಾಶಂಕರ್ ಅಂಬೇಕರ್ ಅಧಿಕಾರ ವಹಿಸಿಕೊಂಡರು.

ಮಂಗಳೂರು ಕರ‌್ಹಾಡ ಬ್ರಾಹ್ಮಣ ಸಮಾಜ ಸಂಘದ ಅಧ್ಯಕ್ಷ ಅನಂತಶಯನ ಭಟ್ ಸ್ವಾಗತಿಸಿದರು. ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಾರಿಜಾ ವಂದಿಸಿದರು. ಬೆಳಗ್ಗೆ ಭವನದ ಆವರಣದಲ್ಲಿ ನಿವೃತ್ತ ಯೋಧ ಕನ್ನಡ್ಕ ಚಂದ್ರಮೋಹನ್ ಭಟ್ ಮತ್ತು ಜಯರಾಮ ಭಟ್ ಕೋಮುಂಜೆ ಧ್ವಜಾರೋಹಣ ನೆರವೇರಿಸಿದರು.