ನರಗುಂದ ಪಟ್ಟಣದ ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನಿವೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಪುರಸಭೆಯ ನೂತನ ಕಟ್ಟಡ 
ಜಿಲ್ಲೆ

ನನಸಾಗದ ನರಗುಂದ ಪುರಸಭೆಯ ಹೊಸ ಕಟ್ಟಡದ ಕನಸು

ನರಗುಂದ: ರೈತ ಬಂಡಾಯಕ್ಕೆ ಸಾಕ್ಷಿಯಾಗಿ ನಿಂತಿದ್ದ ಹಳೆಯ ತಹಸೀಲ್ದಾರ್ ಕಚೇರಿ ನೆಲಸಮಗೊಳಿಸಿದ ಸ್ಥಳದಲ್ಲಿ ಪುರಸಭೆಯ ನೂತನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಕಾಮಗಾರಿ ಪ್ರಾರಂಭಿಸಿ 6 ವರ್ಷ ಗತಿಸಿದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ಇಕ್ಕಟ್ಟಾದ ಬಾಬಾಸಾಹೇಬರ ಅರಮನೆ (ಇಂದಿನ ಪುರಸಭೆ)ಯಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸುವುದು ಕಷ್ಟವಾಗಿದೆ. ಜನನ- ಮರಣ ನೋಂದಣಿ, ಆಸ್ತಿ, ನೀರಿನ ತೆರಿಗೆ ಸೇರಿ ವಿವಿಧ ಅಭಿವೃದ್ಧಿ ಕರಗಳ ಪಾವತಿ, ಮಹತ್ವದ ಸಭೆ, ಸಮಾರಂಭಗಳನ್ನು ನಡೆಸಲಾಗುತ್ತಿದೆ. ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯ ಕಟ್ಟಡದ ಕೆಲ ಭಾಗಗಳು ಶಿಥಿಲಾವಸ್ಥೆಗೆ ತಲುಪಿವೆ. ಮಳೆಗಾಲದಲ್ಲಿ ಛಾವಣಿ ಸೋರುತ್ತದೆ. ಹೀಗಾಗಿಯೇ 2017ರಲ್ಲಿ 5.14 ಕೋಟಿ ರೂ. ವೆಚ್ಚದಲ್ಲಿ ಪುರಸಭೆಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಮಾಜಿ ಶಾಸಕ ಬಿ.ಆರ್. ಯಾವಗಲ್ ಭೂಮಿಪೂಜೆ ನೆರವೇರಿಸಿದ್ದರು. ಕಟ್ಟಡ ನಿರ್ಮಾಣದ ಹೊಣೆ ಹೊತ್ತಿದ್ದ ಮುಂಬೈ ಮೂಲದ ಕಂಪನಿಯ ವಿಳಂಬ ಧೋರಣೆಯಿಂದಾಗಿ ಕಟ್ಟಡದ ಶೇ.30ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ. ಶೇ. 70ರಷ್ಟು ಕೆಲಸ ಮುಗಿಸಿರುವ ಗುತ್ತಿಗೆದಾರರು ಕಟ್ಟಡಕ್ಕೆ ಕಿಟಕಿ, ಬಾಗಿಲು ಹಚ್ಚುವುದು, ಸುಣ್ಣ- ಬಣ್ಣ ಬಳಿಯುವುದು. ಗ್ರಾನೈಟ್ ಜೋಡಣೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಸೇರಿ ವಿವಿಧ ಕಾಮಗಾರಿಗಳನ್ನು ನಡೆಸಬೇಕಿದೆ. ಹೀಗಾಗಿ ಗುತ್ತಿಗೆದಾರರಿಗೆ 2.83 ಕೋಟಿ ರೂಪಾಯಿ ಬಾಕಿ ಬಿಲ್ ಪುರಸಭೆಯಿಂದ ಪಾವತಿಸಿಲ್ಲ.

ವಿಳಂಬಕ್ಕೆ ಕಾರಣ ಏನು: 2017ರಲ್ಲಿ ಪುರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆಗ ಮಾಜಿ ಶಾಸಕರಾಗಿದ್ದ ಸಿ.ಸಿ. ಪಾಟೀಲರು ಕಟ್ಟಡದ ತಳಪಾಯ ಕಳಪೆಯಾಗಿದೆ ಎಂದು ಆರೋಪಿಸಿ ಕಾಮಗಾರಿ ತಡೆ ಹಿಡಿದಿದ್ದರು. ಕಾಮಗಾರಿಯನ್ನು ತನಿಖೆ ಮಾಡಿಸಿ, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಆಗ್ರಹಿಸಿದ್ದರು. ಆದರೆ, 2018 ಮತ್ತು 2023ರಲ್ಲಿ ಅವರೇ ಶಾಸಕರಾಗಿದ್ದರೂ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಿಲ್ಲ. ಎಲ್ಲವೂ ಗೊತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮೂರು ಹಂತಗಳಲ್ಲಿ 3.6 ಕೋಟಿ ರೂಪಾಯಿ ಬಿಲ್ ಪಾವತಿಸಿದ್ದಾರೆ.

ಬಾಬಾಸಾಹೇಬರ ಅರಮನೆಯನ್ನು ವಸ್ತುಸಂಗ್ರಹಾಲಯ ಮಾಡಬೇಕು. ಐತಿಹಾಸಿಕ ಕುರುಹುಗಳನ್ನು ಸಂರಕ್ಷಿಸುವುದರ ಜತೆಗೆ ನರಗುಂದವನ್ನು ಪ್ರವಾಸಿ ತಾಣವಾಗಿಸಬೇಕೆನ್ನುವ ಕಾರಣಕ್ಕೆ ಪುರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು. ಆದರೆ, ರಾಜಕೀಯ ಕಾರಣದಿಂದ ಕಟ್ಟಡ ನಿರ್ಮಾಣ ಆಮೆಗತಿಯಲ್ಲಿ ಸಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿಬಾಕಿ ಕಾಮಗಾರಿ ಪೂರ್ಣಗೊಳಿಸಬೇಕು.-ಐ.ಪಿ. ಚಂದೂನವರ ನರಗುಂದ ನಿವಾಸಿ ನೂತನ ಕಟ್ಟಡದ ಶೇ. 70ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಶೇ.30ರಷ್ಟು ಕೆಲಸ ಮಾತ್ರ ಬಾಕಿಯಿವೆ. ಗುತ್ತಿಗೆದಾರರಿಗೆ 2.83 ಕೋಟಿ ರೂ. ಬಿಲ್ ಪಾವತಿಸಬೇಕಿದೆ. ಹಣಕಾಸು ಇಲಾಖೆಯಿಂದ ಅನುದಾನ ಬಂದ ತಕ್ಷಣ ಬಾಕಿ ನೀಡಲಾಗುವುದು. ಎಲ್ಲ ಕೆಲಸಗಳು ಸುಗಮವಾಗಿ ನಡೆದರೆ ಎರಡ್ಮೂರು ತಿಂಗಳಲ್ಲಿ ಕಟ್ಟಡದ ಉದ್ಘಾಟನೆಗೆ ಸಿದ್ಧವಾಗಲಿದೆ. -ಅಮಿತ್ ತಾರದಾಳೆ ಮುಖ್ಯಾಧಿಕಾರಿ, ನರಗುಂದ ಪುರಸಭೆ