ಜಿಲ್ಲೆ

ಮರೆಯದ ಮಾಣಿಕ್ಯ ಎಸ್.ಜಯಣ್ಣ

ಪ್ರಸಿನ್ ಕೆ.ಆರ್

ಕೊಳ್ಳೇಗಾಲ: ಸಾರ್ವಜನಿಕ ಸೇವೆಗೆ ಜೀವನ ಮೀಸಲು ಎಂಬುದನ್ನು ಎಸ್.ಜಯಣ್ಣ ತೋರಿಸಿಕೊಟ್ಟಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.

ಪಟ್ಟಣದ ಶ್ರೀ ಭಮ್ರರಾಂಭ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್.ಜಯಣ್ಣ ಅವರ ನುಡಿನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಎಸ್.ಜಯಣ್ಣ ವಿದ್ಯಾರ್ಥಿ ದೆಸೆಯಲ್ಲಿಯೇ ದೊಡ್ಡ ಲೀಡರ್, ನಾನು ಅವರ ಮುಂದೆ ಏನಿಲ್ಲ. ಕ್ಷೇತ್ರದ ಜನರ ಅಭಿವೃದ್ಧಿಯಲ್ಲಿ ದೂರದೃಷ್ಟಿ ಇಟ್ಟುಕೊಂಡಿದ್ದರು. ಅವರಿಗೆ 3 ತಾಲೂಕಿನ ನಾಡಿ ಮಿಡಿತ ಗೊತ್ತಿತ್ತು. ಅಗಾಧ ಸಾಮರ್ಥ್ಯ, ವಿವೇಕ, ಚಿಂತನೆವುಳ್ಳ ವ್ಯಕ್ತಿಯಾಗಿದ್ದರು. ನಿಜಕ್ಕೂ ಮರೆಯದ ಮಾಣಿಕ್ಯ ಎಸ್.ಜಯಣ್ಣ ಎಂದು ಬಣ್ಣಿಸಿದರು.

ಕ್ಷೇತ್ರಕ್ಕೆ ನಾಗರಿಕ ಸವಲತ್ತುಗಳನ್ನು ನೀಡಲು ಶ್ರಮಿಸಿದ ರಾಜಕಾರಣಿ. ಎಲ್ಲ ವರ್ಗದ ಪ್ರೀತಿ, ನಂಬಿಕೆ ಹಾಗೂ ಭರವಸೆ ನಾಯಕ. ಇಂತಹ ಮಹಾನ್ ನಾಯಕನನ್ನು ಕಳೆದುಕೊಂಡಿರುವುದು ಜಿಲ್ಲೆಯ ಜನರಿಗೆ ತುಂಬಲಾಗದ ನಷ್ಟವಾಗಿದೆ. ದೊಡ್ಡ ಆಲದ ಮರವಾಗಿ ಎಲ್ಲರಿಗೂ ನೆರಳು ನೀಡಿರುವ ಜಯಣ್ಣ ಸ್ಫೂರ್ತಿ ಎಂದರು.

ನನ್ನ ಮೇಲೆ ಜೋರು ಮಾಡಿ ರಸ್ತೆ ಇನ್ನಿತರ ಅಭಿವೃದ್ಧಿ ಕೆಲಸವನ್ನು ಮಾಡಿಸಿದ್ದಾರೆ. ವೈಯಕ್ತಿಕವಾಗಿ ಏನನ್ನೂ ಕೇಳಲಿಲ್ಲ. ತನ್ನ ಆಪ್ತರ ಕಷ್ಟಗಳಿಗೆ ಮರುಗುತ್ತಿದ್ದರು. ತಮ್ಮವರಿಗೆ ಅನ್ಯಾಯವಾದರೆ ಕಣ್ಣೀರು ಹಾಕುತ್ತಿದ್ದರು. ಸಿದ್ಧಾಂತ, ಬದ್ಧತೆಗೆ ನಡೆದುಕೊಳ್ಳುತ್ತಿದ್ದರು. ಜಿಲ್ಲೆಯು ವಿ.ಶ್ರೀನಿವಾಸ್‌ಪ್ರಸಾದ್, ಎಚ್.ಎಸ್.ಮಹದೇವಪ್ರಸಾದ್, ಆರ್.ಧ್ರುವನಾರಾಯಣ ಹಾಗೂ ಎಸ್.ಜಯಣ್ಣ ಅವರಂತಹ ನಾಯಕರನ್ನು ಕಳೆದುಕೊಂಡಿದೆ. ಜಯಣ್ಣರಿಗೆ ಕ್ಯಾನ್ಸರ್ ಇತ್ತು. ಸಿಎಂ ಮತ್ತು ನಾನು ಅವರಿಗೆ ಹಿಂದೆ ಚಿಕಿತ್ಸೆ ಕೊಡಿಸಿದ್ದೆವು. ಆರೋಗ್ಯದಲ್ಲಿ ನಿರ್ಲಕ್ಷೃ ವಹಿಸಿದ್ದರಿಂದ ನಮ್ಮನ್ನು ಅಗಲಿದ್ದಾರೆ. ಆದ್ದರಿಂದ ನಾವೆಲ್ಲರೂ ಅವರ ಚಿಂತನೆಯಲ್ಲಿ ನಡೆಯೋಣ, ಜಿಲ್ಲೆಯ ಅಭಿವೃದ್ಧಿಗೆ ದುಡಿಯೋಣ ಎಂದು ಹೇಳಿದರು.

ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್ ಮಾತನಾಡಿ, ಎಸ್.ಜಯಣ್ಣ ನನಗೆ ಒಳ್ಳೇಯ ಸ್ನೇಹಿತ. ಅವರ ಅಗಲಿಕೆ ಅನಿರೀಕ್ಷಿತವಾದದ್ದು. ಸಿಎಂ ಸಿದ್ದರಾಮಯ್ಯ ಅವರು ಜಯಣ್ಣರ ಮೇಲೆ ವಿಶೇಷವಾದ ಪ್ರೀತಿ ಹೊಂದಿದ್ದರು. ಅಂತೆಯೇ, ಜಯಣ್ಣ ಸಹ ಸಿದ್ದರಾಮಯ್ಯ ಅವರ ಮೇಲೆ ಬಹಳ ಪ್ರೀತಿ, ವಿಶ್ವಾಸ ಇಟ್ಟುಕೊಂಡಿದ್ದರು. ಜಯಣ್ಣ ಅವರ ಪಾರ್ಥಿವ ಶರೀರ ನೋಡಿದ ಸಿದ್ದರಾಮಯ್ಯ ಅವರು ಬಹಳ ನೋವು ವ್ಯಕ್ತಪಡಿಸಿದ್ದರು. ಅವರ ಅಗಲಿಕೆಯ ಶಕ್ತಿಯನ್ನು ಎಲ್ಲರಿಗೂ ಆ ದೇವರು ನೀಡಲಿ ಎಂದು ಪ್ರಾರ್ಥಿಸಿದರು.

ಶಾಸಕ ಗಣೇಶ್ ಪ್ರಸಾದ್ ಮಾತನಾಡಿ, ಎಸ್.ಜಯಣ್ಣ ಕೊಳ್ಳೇಗಾಲ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಯೋಜನೆ ತಂದಿದ್ದಾರೆ. ನಾನು ಸಹ ಬಾಲ್ಯದಿಂದಲೂ ನೋಡಿ ಬೆಳೆದಿದ್ದೇವೆ. ಜಯಣ್ಣ ಕುಟುಂಬ ಹಾಗೂ ಬೆಂಬಲಿಗರೊಂದಿಗೆ ನಾವಿದ್ದೇವೆ ಎಂದರು.

ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಕೊಳ್ಳೇಗಾಲ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡಲು ಎಸ್.ಜಯಣ್ಣ ಅವರು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದಾರೆ. ನನ್ನ ತಂದೆ ಅಗಲಿದ ನಂತರ ನನಗೆ ಜಯಣ್ಣ ಅವರು ನಿರಂತರವಾಗಿ ಮಾರ್ಗದರ್ಶನ ನೀಡಿ ನೆರವಾಗಿದ್ದರು ಎಂದರು.

ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಎಸ್.ಜಯಣ್ಣ ಅವರು ಅಜಾತಶತ್ರು ಆಗಿದ್ದರು. ಬಡವರು, ನಿರ್ಗತಿಕರ ಬಗ್ಗೆ ಕಾಳಜಿ ಹೊಂದಿದ್ದರು ಎಂದರು.