ಜಿಲ್ಲೆ

ತುಳುನಾಡಿನ ಜೀವನಾಡಿ ಕೃಷಿ ನಿಜ ಸ್ವರೂಪಕ್ಕೆ ಧಕ್ಕೆ: ಡಾ.ಗಣನಾಥ ಶೆಟ್ಟಿ ಎಕ್ಕಾರ್ ಅಭಿಮತ

ಹಳೆಯಂಗಡಿ: ಕರಾವಳಿ ತುಳುನಾಡಿನ ಜೀವನಾಡಿಯಾಗಿರುವ ಕೃಷಿ ಬದುಕು ಮತ್ತು ಜನಪದ ಪರಂಪರೆ ಇತ್ತೀಚಿನ ದಿನಗಳಲ್ಲಿ ವೈದಿಕ ಸಂಸ್ಕೃತಿಯ ಆಕ್ರಮಣದಿಂದ ತನ್ನ ನಿಜರೂಪ ಕಳೆದುಕೊಳ್ಳುತ್ತಿದೆ ಎಂದು ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಹಿರಿಯ ಜಾನಪದ ವಿದ್ವಾಂಸ ಡಾ.ಗಣನಾಥ ಶೆಟ್ಟಿ ಎಕ್ಕಾರ್ ಅಭಿಪ್ರಾಯಪಟ್ಟರು.

ಮಂಗಳೂರು ವಿವಿ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಮತ್ತು ಕಾಟಿಪಳ್ಳ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆ,ಪಾವಂಜೆಯ ನಿನಾದ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆದ ತುಳುನಾಡಿನ ಕೃಷಿ ಪರಂಪರೆ ಮತ್ತು ಆಚರಣೆಗಳು ಎಂಬ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಅಧ್ಯಯನ ಪೀಠದ ನಿರ್ದೇಶಕ ಡಾ.ಜಯರಾಜ್ ಎನ್.ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಟಿಪಳ್ಳ ಬ್ರಹ್ಮಶ್ರೀ ನಾರಾಯಣಗುರು ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ.ದಯಾಕರ್, ಸಂಪನ್ಮೂಲ ವ್ಯಕ್ತಿಯಾಗಿದ್ದ ಜನಪದ ವಿದ್ವಾಂಸ ಕೆ.ಕೆ.ಪೇಜಾವರ, ಹಳೆಯಂಗಡಿ ಪ್ರಿಯದರ್ಶಿನಿ ಸಹಕಾರಿ ಸಂಘ ಅಧ್ಯಕ್ಷ ವಸಂತ ಬೆರ್ನಾಡ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ತುಳುನಾಡಿನ ವೀರಯೋಧ ಆಕಾಶ್ ಆರ್.ಅವರನ್ನು ಅಭಿನಂದಿಸಲಾಯಿತು. ಕಡಂಬೋಡಿ ಮಹಾಬಲ ಪೂಜಾರಿ ಮತ್ತು ಕುಸುಮ ಮಹಾಬಲ, ಓರಿಯಂಟಲ್ ಇನ್ಶೂರೆನ್ಸ್ ಕಂಪನಿ ಮಂಗಳೂರು ಹಿರಿಯ ವಲಯ ಪ್ರಬಂಧಕ ಯಾದವ ದೇವಾಡಿಗ, ಕಾರ್ಯಕ್ರಮ ಸಂಯೋಜಕ ಯಶೋಧರ ಸಾಲ್ಯಾನ್, ಕೇಂದ್ರದ ಕಾರ್ಯದರ್ಶಿ ಜಯಂತಿ ಸಂಕಮಾರ್, ಅಧ್ಯಯನ ಪೀಠದ ಸಂಶೋಧನಾ ಸಹಾಯಕ ಡಾ.ರವಿರಾಜ್ ಬಿ.ವಿ.ಉಪಸ್ಥಿತರಿದ್ದರು.

ಕೇಂದ್ರದ ಅಧ್ಯಕ್ಷ ಡಾ.ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿದರು. ಭವ ಅಮೀನ್ ಸಂಕಮಾರ್ ನಿರೂಪಿಸಿದರು.

ಕೃಷಿ ಪರಂಪರೆಯ ಪ್ರಾತ್ಯಕ್ಷಿಕೆ

ಪಾವಂಜೆಯ ಹಿರಿಯ ಪ್ರಗತಿಪರ ಕೃಷಿಕ ರಮೇಶ್ ದೇವಾಡಿಗ ಗದ್ದೆಗೆ ಬೀಜ ಬಿತ್ತುವ ಮೂಲಕ ಅಕ್ಕಿಮುಡಿ ಕಟ್ಟುವ ಕೃಷಿ ಪರಂಪರೆಯ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಪ್ರದರ್ಶಿಸಿದರು. ಕಾಟಿಪಳ್ಳ ನಾರಾಯಣಗುರು ಶಿಕ್ಷಣ ಸಂಸ್ಥೆಯ ಮತ್ತು ಮಂಗಳೂರಿನ ವಿವಿ ಕಾಲೇಜಿನ ವಿದ್ಯಾರ್ಥಿಗಳು ತಪ್ಪಂಗಾಯ್ ಎತ್ತುವ ಮೂಲಕ ಅಡಕೆಯ ಜೂಜನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶಿಷ್ಟ ಮೆರುಗನ್ನು ನೀಡಿದರು.