ನಂಜನಗೂಡು: ಕನ್ನಡ ಶಾಲೆಗೆ ಹೈಟೆಕ್ ಶೌಚಗೃಹ ನಿರ್ಮಾಣ ಕುರಿತು ಕಳೆದ ಎರಡು ವರ್ಷಗಳಿಂದ ಅನುದಾನ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಸುದ್ದಿ ಪ್ರಸರಣವಾಗುತ್ತಿದ್ದಂತೆ ತಾಲೂಕಿನ ದೊಡ್ಡ ಕವಲಂದೆ ಕನ್ನಡ ಶಾಲೆ ಮತ್ತು ಗ್ರಾಪಂ ಕಚೇರಿಗೆ ಮಂಗಳವಾರ ತಾಲೂಕು ಪಂಚಾಯಿತಿ ಇ ಒ ಜೆರಾಲ್ಡ್ ರಾಜೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ದೊಡ್ಡ ಕವಲಂದೆ ಕನ್ನಡ ಶಾಲೆಯಲ್ಲಿ ಶೌಚಗೃಹ ಇಲ್ಲದೆ ಇಲ್ಲಿನ ವಿದ್ಯಾರ್ಥಿಗಳು ಪರದಾಡುತ್ತಿರುವ ಸಮಸ್ಯೆಗಳನ್ನು ಪತ್ರಿಕೆಗಳಿಂದ ಗಮನಿಸಿದ್ದೇನೆ. ಈ ಹಿಂದೆ ಇದ್ದ ಪಿಡಿಒ ಹಣಕಾಸಿನ ವಿಚಾರದಲ್ಲಿ ವ್ಯತ್ಯಾಸವಾಗಿದೆ. ಈ ಸಂಬಂಧ ತನಿಖೆ ಕೂಡ ನಡೆಯುತ್ತಿದೆ. ಗ್ರಾಪಂ ನಿಧಿ ಮತ್ತು 15ನೇ ಹಣಕಾಸು ಆಯೋಗದಲ್ಲಿ ಇನ್ನೂ ಒಂದು ತಿಂಗಳ ಒಳಗೆ ಶೌಚಗೃಹವನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ಆಗಿರುವ ಸಮಸ್ಯೆ ತಪ್ಪಿಸುವಂತೆ ಪಿಡಿಒ ಮತ್ತು ಶಾಲಾ ಶಿಕ್ಷಕರಿಗೆ ಆದೇಶ ಮಾಡಿದ್ದೇನೆ. ನಾಳೆಯಿಂದಲೇ ಕೆಲಸ ಪ್ರಾರಂಭವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳಿಗೆ ಗ್ರಾಪಂನಿಂದ ಇನ್ನು ಮುಂದೆ ವಿಳಂಬವಾಗುವುದಕ್ಕೆ ಬಿಡುವುದಿಲ್ಲ ಎಂದರು.
ಪಿಡಿಒ ನಿರ್ಮಲಾ, ಕಾರ್ಯದರ್ಶಿ ಬೋರೇಗೌಡ, ಗ್ರಾಪಂ ಸದಸ್ಯ ಮಂಜುನಾಥ್, ಮುಖಂಡ ನಾಜಿ ಮುಲ್ಲಾ ಖಾನ್ ಇದ್ದರು.