ಜಿಲ್ಲೆ

ಜಡ್ಡುಗಟ್ಟಿದ ಸರ್ಕಾರಕ್ಕೆ ಚಾಟಿ ಬೀಸುವ ಕಾಲ ಬಂದಿದೆ : ಚಂದ್ರಮೌಳಿ ತೀವ್ರ ಅಸಮಾಧಾನ

ಮಡಿಕೇರಿ: ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರ ಶೇ.೪೦ ರಷ್ಟು ಕಮಿಷನ್ ಮೊದಲು ಸಿಗಲಿ, ಆಮೇಲೆ ರಸ್ತೆ ಗುಂಡಿ ಮುಚ್ಚುತ್ತೇವೆ ಎನ್ನುವ ಮನೋಭಾವದಲ್ಲಿದೆ ಎಂದು ಆರೋಪಿಸಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಚಂದ್ರಮೌಳಿ, ಜಡ್ಡುಗಟ್ಟಿರುವ ಸರ್ಕಾರಕ್ಕೆ ಜನರು ಚಾಟಿ ಬೀಸುವ ಕಾಲ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯ ಗುಂಡಿಗಳ ಸಾಮ್ರಾಜ್ಯವಾಗಿದೆ. ರಸ್ತೆ ಗುಂಡಿ ಮುಚ್ಚದೆ ಇರಲು ಕಮಿಷನ್ ಹುನ್ನಾರವೇ ಕಾರಣವಾಗಿದೆ. ಬೆಂಗಳೂರು ಭಾಗದಲ್ಲಿ ಆಯಾ ಬಡಾವಣೆಗಳ ಜನರೇ ಹಣ ಹಾಕಿ ಗುಂಡಿ ಮುಚ್ಚುತ್ತಿದ್ದಾರೆ ಎಂದು ಟೀಕಿಸಿದ್ದಾರೆ.


ಕೊಡಗಿನ ಬೆಳೆಗಾರರು, ಜನಸಾಮಾನ್ಯರು ಸಾಲಗಳನ್ನು ತೀರಿಸಲಾಗದೆ ಸಂಕಷ್ಟದಲ್ಲಿದ್ದಾರೆ. ಈ ನಡುವೆ ರಸ್ತೆಗಳ ಗುಂಡಿಗಳು ಬೇರೆ ಕಾಡುತ್ತಿದೆ. ಕೊಡಗಿನಿಂದ ಸರ್ಕಾರಕ್ಕೆ ಹೋಗುತ್ತಿರುವ ಆದಾಯದಲ್ಲಿ ಶೇ.೧೦ ರಷ್ಟನ್ನು ಕೊಡಗಿಗೆ ಬಿಡುಗಡೆ ಮಾಡಿದರೆ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ನಡೆಯಲಿದೆ. ಆದರೆ ಕನಿಷ್ಠ ರಸ್ತೆಗಳ ಗುಂಡಿಗಳನ್ನೇ ಮುಚ್ಚಲಾಗದ ಪರಿಸ್ಥಿತಿಯಲ್ಲಿ ಆಡಳಿತ ವ್ಯವಸ್ಥೆ ಇದೆ.


ಜಡ್ಡುಗಟ್ಟಿದ ವ್ಯವಸ್ಥೆ ವಿರುದ್ಧ ಜನರೇ ಜಾಗೃತಗೊಳ್ಳಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಕಾರನ್ನು ಅಡ್ಡಗಟ್ಟಿ ರಸ್ತೆ ದುರಸ್ತಿ ಮಾಡುವವರೆಗೆ ಬಿಡುವುದಿಲ್ಲವೆಂದು ಪಟ್ಟು ಹಿಡಿಯುವ ಹೋರಾಟಗಳನ್ನು ಮಾಡಬೇಕಾಗುತ್ತದೆ. ಇಲ್ಲದಿದ್ದರೆ ನಾವು ಹೇಗಿದ್ದರೂ ಗೆದ್ದು ಬರುತ್ತೇವೆ ಎನ್ನುವ ಭ್ರಮೆಯಲ್ಲೇ ಕಾಲ ಕಳೆದು ಬಿಡುತ್ತಾರೆ ಎಂದು ಚಂದ್ರಮೌಳಿ ತಿಳಿಸಿದ್ದಾರೆ.


ಕೊಡಗು ಜಿಲ್ಲೆಗೆ ಸರ್ವಋತುವಿನ ರಸ್ತೆಗಳ ಅಗತ್ಯವಿದೆ, ಜಿಲ್ಲಾಧಿಕಾರಿಗಳ ಬಳಿ ಇರುವ ಮಳೆಹಾನಿ ಪರಿಹಾರದ ಹಣವನ್ನು ಸಕಾಲದಲ್ಲಿ ಬಳಕೆ ಮಾಡಬೇಕಾಗುತ್ತದೆ. ಆದರೆ ಇಲ್ಲಿ ಯಾವುದೂ ನಡೆಯುತ್ತಿಲ್ಲ, ಜನಪ್ರತಿನಿಧಿಗಳು ಎನಿಸಿಕೊಂಡವರ ಇಚ್ಛಾಶಕ್ತಿಯ ಕೊರತೆಯಿಂದ ಜನರು ಬಲಿಪಶುಗಳಾಗುತ್ತಿದಾರೆ. ಜಡ್ಡುಗಟ್ಟಿದ ವ್ಯವಸ್ಥೆ ವಿರುದ್ಧ ಜನರೇ ಜಾಗೃತರಾಗಿ ಚಾಟಿ ಬೀಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ.