ಜಿಲ್ಲೆ

ಮೂರನೇ ವಾರವೂ ಮಿಶ್ರ ಪ್ರತಿಕ್ರಿಯೆ

Mysuru

ಮೈಸೂರು: ಕರೊನಾ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಘೋಷಿಸಿರುವ ಭಾನುವಾರದ ಲಾಕ್‌ಡೌನ್‌ಗೆ ಸತತ ಮೂರನೇ ವಾರವೂ ಸಾಂಸ್ಕೃತಿಕ ನಗರಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದ ಹೃದಯ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ, ಬಡಾವಣೆಗಳಲ್ಲಿ ಜನ, ದ್ವಿಚಕ್ರ ವಾಹನಗಳ ಸಂಚಾರ ಎಂದಿನಂತೆ ಸಾಮಾನ್ಯ ಸ್ಥಿತಿಯಲ್ಲಿಯೇ ಕಂಡುಬಂತು. ಪೊಲೀಸರ ಬಿಗಿ ಕಾವಲಿನ ನಡುವೆ ವೈದ್ಯಕೀಯ ತುರ್ತು ಅವಶ್ಯಕತೆ ಇರುವವರಿಗೆ ಮಾತ್ರ ಮುಖ್ಯರಸ್ತೆಗಳಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಇಟ್ಟು ಬಂದ್ ಮಾಡಲಾಗಿತ್ತು.

ಸದಾ ಜನ ಜಂಗುಳಿ ಇರುವ ನಗರದ ಸಯ್ಯಜಿರಾವ್ ರಸ್ತೆ, ಅಶೋಕ ರಸ್ತೆ, ಬಿ.ಎಂ.ರಸ್ತೆ, ಎಂ.ಜಿ.ರಸ್ತೆ, ಡಿ.ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ, ಇರ್ವಿನ್ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೆಚ್ಚಾಗಿತ್ತು. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ರಸ್ತೆಗೆ ಇಳಿಯದ ಕಾರಣ ಗ್ರಾಮಾಂತರ, ನಗರ ಬಸ್ ನಿಲ್ದಾಣ, ಆಟೋ, ಟ್ಯಾಕ್ಸಿ ಸ್ಟಾೃಂಡ್‌ಗಳು ಬಿಕೋ ಎನ್ನುತ್ತಿದ್ದವು.

ಮಾಂಸ ಮಾರುಕಟ್ಟೆಯಲ್ಲಿ ಜನ: ಲಾಕ್‌ಡೌನ್ ನಡುವೆಯೂ ದೇವರಾಜ ಮಾರುಕಟ್ಟೆಗೆ ಹೊಂದಿಕೊಂಡಂತಿರುವ ಬೋಟಿ ಬಜಾರ್‌ನಲ್ಲಿ ಜನರು ಮಾಂಸ ಖರೀದಿಗಾಗಿ ಮುಗಿಬಿದ್ದರು. ದೇವರಾಜ ಮಾರುಕಟ್ಟೆಯಲ್ಲಿ ಕೆಲವು ವರ್ತಕರು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದರೂ, ಗ್ರಾಹಕರು ಮಾರುಕಟ್ಟೆಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಸುಳಿಯಲಿಲ್ಲ.

ಈಗಾಗಲೇ ಜು.24ರವರೆಗೆ ಲಾಕ್‌ಡೌನ್ ಆಗಿರುವ ಎನ್.ಆರ್.ವಿಧಾನಸಭಾ ಕ್ಷೇತ್ರದ ಬಡಾವಣೆಗಳಲ್ಲಿ ಜನರು ವಿರಳವಾಗಿದ್ದರೂ, ಕೃಷ್ಣರಾಜ, ಚಾಮರಾಜ ಕ್ಷೇತ್ರದ ಹಲವು ಬಡಾವಣೆಗಳಲ್ಲಿ ಜನರು ಸಾಮಾನ್ಯ ದಿನಗಳಂತೆ ಸಂಚರಿಸುತ್ತಿದ್ದರು.