ಜಿಲ್ಲೆ

ಜ್ಞಾನ ಮತ್ತು ಭಕ್ತಿಯ ಸಮನ್ವಯ ಶಿವಾದ್ವೆತ ಸಿದ್ಧಾಂತ; ವಿಚಾರ ಸಂಕಿರಣ ಸಮಾರೋಪ

ತಿರುಪತಿ: ವೀರಶೈವ ಸಿದ್ಧಾಂತದ ಮೂಲಭೂತ ತತ್ವಗಳನ್ನು ವಿವರಿಸುವ ಶ್ರೀಸಿದ್ಧಾಂತ ಶಿಖಾಮಣಿ ಗ್ರಂಥ ಜ್ಞಾನ ಮತ್ತು ಭಕ್ತಿ ಮಾರ್ಗಗಳ ಸಮನ್ವಯವನ್ನು ಎತ್ತಿ ಹಿಡಿದಿದೆ ಎಂದು ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಗಣಪತಿ ಭಟ್ ವ್ಯಾಖ್ಯಾನಿಸಿದ್ದಾರೆ.

ಅಖಿಲ ಭಾರತ ಶಿವಾಚಾರ್ಯ ಸಂಸ್ಥೆ ಮತ್ತು ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿವಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಕ್ತಿವಿಶಿಷ್ಟಾದ್ವೆತ ಕುರಿತು ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಶೈವ ಸಿದ್ಧಾಂತದ ಮಹತ್ವವನ್ನು ವಿವರಿಸುವ ಸಿದ್ಧಾಂತ ಶಿಖಾಮಣಿಯಲ್ಲಿ ಶಿವತತ್ತ್ವ, ಪಂಚಾಚಾರ, ಅಷ್ಟಾವರಣ, ಲಿಂಗ ಧಾರಣೆ, ಹಾಗೂ ಮುಕ್ತಿಯ ಮಾರ್ಗಗಳ ಕುರಿತು ಸ್ಪಷ್ಟ ನಿರೂಪಣೆ ನೀಡಲಾಗಿದೆ. ಶೈವ ಧರ್ಮದ ಪ್ರಮುಖ ಅನುಷ್ಠಾನಗಳಾದ ಪಂಚಾಚಾರ, ಅಷ್ಟಾವರಣ, ಷಟಸ್ಥಲಗಳ ಜೊತೆಗೆ ಶಿವನ ಪರಬ್ರಹ್ಮತ್ವವನ್ನು ಪ್ರತಿಪಾದಿಸುವ ಮೂಲಕ ವೇದಾಂತ ಮತ್ತು ಶೈವ ತತ್ತ್ವಗಳ ಸಮನ್ವಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆದ್ದರಿಂದ ಈ ಗ್ರಂಥವು ಶೈವ ಪರಂಪರೆಯ ಆಧ್ಯಾತ್ಮಿಕ ಮತ್ತು ತಾತ್ತ್ವಿಕ ಮೂಲಾಧಾರವಾಗಿದ್ದು, ಲಿಂಗಾಯತ ಧರ್ಮದ ತತ್ವಶಾಸವನ್ನ ಬಲಪಡಿಸುವ ಪ್ರಮುಖ ಗ್ರಂಥವಾಗಿದೆ ಎಂದು ವಿವರಿಸಿದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಕುಲಸಚಿವ ವೆಂಕಟನಾರಾಯಣ ರಾವ್ ಮಾತನಾಡಿ, ಭಾರತದಲ್ಲಿ ಶೈವ ಪರಂಪರೆ ಅತ್ಯಂತ ಪ್ರಾಚೀನವಾಗಿದೆ. ವೇದ ಉಪನಿಷತ್ತು ಶೈವಾಗಮಗಳು ಶೈವದರ್ಶದ ಅಡಿಪಾಯ. ಇವುಗಳ ಆಧಾರದಲ್ಲಿ ಸಮಾಜದ ಎಲ್ಲ ವರ್ಗಗಳ ಕಲ್ಯಾಣಕ್ಕಾಗಿ ಯಾವುದೇ ಭೇದಭಾವವಿಲ್ಲದೇ ಲಿಂಗದೀಕ್ಷೆಯ ಮೂಲಕ ಸಮಾನತೆ ಹಾಗೂ ಆಧ್ಯಾತ್ಮಿಕ ಸಾಧನೆಯ ಮಾರ್ಗವನ್ನು ತೋರುವಲ್ಲಿ ಶಿವಾದ್ವೆತ ದರ್ಶನ ಪ್ರಮುಖವಾಗಿದೆ ಎಂದರು.

ವಾರಾಣಸಿಯ ಹಿಂದೂ ವಿಶ್ವವಿದ್ಯಾಲಯದ ಧರ್ಮವಿಜ್ಞಾನ ವಿಭಾಗದ ಮುಖ್ಯಸ್ಥಾರಾದ ಆಚಾರ್ಯ ಪ್ರೊ.ರಾಜಾರಾಮ್ ಶುಕ್ಲಾ ಅವರಿಗೆ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಕಾಶೀ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಭಗವತ್ಪಾದರು ‘ತರ್ಕಾಲಂಕಾರ ಭೂಷಣ’ ಎಂಬ ಪ್ರಶಸ್ತಿ ನೀಡಿ ಗೌರವಿಸಿದರು.

ಸಮಾರಂಭದಲ್ಲಿ ಕಾಶೀ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಕಾಂಚಿ ಪೀಠದ ಶಂಕರಾಚಾರ್ಯರ ಮುದ್ರಿತ ಆಶೀರ್ವಚನವನ್ನು ಪ್ರಸಾರ ಮಾಡಲಾಯಿತು. ಮೂರು ದಿನಗಳ ವಿಚಾರಗೋಷ್ಠಿಯಲ್ಲಿ 30 ವಿದ್ವಾಂಸರ ಹಾಗೂ 10 ವಿದ್ಯಾರ್ಥಿಗಳ ಪ್ರಬಂಧ ಮಂಡಿಸಲಾಯಿತು. ಶಹಾಪುರ ಮಠದ ಶ್ರೀಸುಗೂರೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು, ವಿದ್ವಾಂಸರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.