ಜಿಲ್ಲೆ

ದೇಗುಲ ಅನುದಾನ ಎಲೆಕ್ಷನ್ ಗಿಮಿಕ್ ಅಲ್ಲ

Tumakuru

ತುಮಕೂರು: ದೇವಸ್ಥಾನಗಳಿಗೆ ಅನುದಾನ ಘೋಷಣೆಯು ಎಲೆಕ್ಷನ್ ಗಿಮಿಕ್ ಅಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ ಸ್ಪಷ್ಟಪಡಿಸಿದರು. ಶಿರಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಚಾಲನೆ ನೀಡಲಾಗಿದೆ. ಈ ವೇಳೆ ತಾಲೂಕಿನಾದ್ಯಂತ ಸಂಚರಿಸುವಾಗ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ, ಸೂರಿಗಾಗಿ ಮನವಿಗಳ ಮಹಾಪೂರ ಹರಿದುಬಂದಿದ್ದು ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಜನರ ಭರವಸೆಗಳನ್ನು ಈಡೇರಿಸಲಾಗುತ್ತಿದೆ. ಇದು ಚುನಾವಣೆ ಪ್ರಚಾರಕ್ಕೆ ಸೀಮಿತವಲ್ಲ ಎಂದು ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಲೂಕಿನ ಐವತ್ತು ಹಳ್ಳಿಗಳ ಜನರು ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಅನುದಾನ ಕೋರಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಳಿ ಪ್ರಸ್ತಾವನೆ ಇಡಲಾಗಿತ್ತು. ಅದರಂತೆ ಯಡಿಯೂರಪ್ಪ ಅವರು 4 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಜಿಲ್ಲಾಧಿಕಾರಿ, ತಹಸೀಲ್ದಾರ್ ಖಾತೆಗೆ ಇನ್ನೊಂದು ವಾರದಲ್ಲಿ ಈ ಹಣ ಜಮೆ ಆಗಲಿದೆ ಎಂದು ಸ್ಪಷ್ಟಪಡಿಸಿದರು.

10 ಸಾವಿರ ಸೂರಿಗಾಗಿ ಮನವಿ: ಸಣ್ಣಪುಟ್ಟ ಸಮುದಾಯಗಳೂ ಸೇರಿ ತಾಲೂಕಿನಾದ್ಯಂತ 10 ಸಾವಿರ ಮನೆಗಳಿಗಾಗಿ ಮನವಿ ಮಾಡಲಾಗಿದ್ದು, ವಸತಿ ಸಚಿವ ವಿ.ಸೋಮಣ್ಣ ಅವರ ಗಮನಕ್ಕೆ ತರಲಾಗಿದೆ. ಮದಲೂರು ಕೆರೆಗೆ ಹೇಮೆ ಹರಿಸಲು ಹೇಮೆ ಯೋಜನೆ ಅಡಿ ನೀರು ನಿಗದಿಯಾಗಿಲ್ಲ. ಆದರೂ, ಈ ಬಾರಿ ಕುಡಿಯುವ ನೀರಿಗಾಗಿ ಮದಲೂರು ಕೆರೆಗೆ ನೀರು ಹರಿಸುವಂತೆ ಆ ಭಾಗದ ಜನರ ಜತೆ ಹೋಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ ಎಂದರು.

ನಾನು ಅಭ್ಯರ್ಥಿಯಲ್ಲ:ಶಿರಾ ವಿಧಾನಸಭೆ ಉಪಚುನಾವಣೆ ಟಿಕೆಟ್ ಆಕಾಂಕ್ಷಿಗಳಲ್ಲಿ ನಾನಿಲ್ಲ. ಜಿಲ್ಲಾಧ್ಯಕ್ಷನಾಗಿ ನನ್ನ ಜವಾಬ್ದಾರಿ ನಿರ್ವಹಿಸಲು ಕ್ಷೇತ್ರ ಸುತ್ತುತ್ತಿದ್ದೇನೆ. ನಮ್ಮಲ್ಲಿ ಬಿ.ಕೆ.ಮಂಜುನಾಥ್ ಹಾಗೂ ಎಸ್.ಆರ್.ಗೌಡ ಇಬ್ಬರು ಅಭ್ಯರ್ಥಿಗಳಿದ್ದಾರೆ. ಹೈಕಮಾಂಡ್ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದೆ. ಬಿಜೆಪಿ ಗೆಲ್ಲಿಸುವ ಮೂಲಕ ಶಿರಾ ತಾಲೂಕಿನ ಜನ ಇತಿಹಾಸ ಬರೆಯಲಿದ್ದಾರೆ. ಕೆ.ಆರ್.ಪೇಟೆಯಲ್ಲೂ ನಮಗೆ ನೆಲೆ ಇರಲಿಲ್ಲ. ಉಪಚುನಾವಣೆಯಲ್ಲಿ ಜಯಭೇರಿ ಬಾರಿಸಲಿಲ್ಲವೇ. ಅದೇರೀತಿ ಈ ಬಾರಿ ಶಿರಾದಲ್ಲಿ ಶತಾಯಗತಾಯ ಗೆದ್ದೇ ಗೆಲ್ಲುತ್ತೇವೆ ಎಂದು ಸುರೇಶ್‌ಗೌಡ ಹೇಳಿದರು.

ಹಿರಿಯೂರಿನಂತೆ ಬಿಜೆಪಿ ಬಾವುಟ ಹಾರಿಸಲು ಸಿದ್ಧ: ಶಿರಾ ಉಪಚುನಾವಣೆ ಕದನ ರಂಗೇರುತ್ತಿದೆ. ದಿನೇದಿನೇ ಮೂರು ಪಕ್ಷಗಳಲ್ಲೂ ಟಿಕೆಟ್ ಆಕಾಂಕ್ಷಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಪತಿ ಡಿ.ಟಿ.ಶ್ರೀನಿವಾಸ್ ಶಿರಾ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಗೊಲ್ಲ ಸಮುದಾಯದ ಚಿತ್ರಲಿಂಗೇಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸುವ ಮೂಲಕ ನಾನು ಶಿರಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಹೇಳಿ ಚುನಾವಣಾ ಕಣವನ್ನು ಮತ್ತಷ್ಟು ರಂಗೇರಿಸಿದ್ದಾರೆ. ಜಿಲ್ಲೆಯಲ್ಲಿ ಹಲವು ಬಾರಿ ಗೊಲ್ಲ ಸಮುದಾಯದ ಸಮಾವೇಶಗಳನ್ನು ಮಾಡಿ ಬಿಜೆಪಿ ಕಟ್ಟುವ ಕೆಲಸ ಮಾಡಿದ್ದೇವೆ. ಲೋಕಸಭೆ ಚುನಾವಣೆ ವೇಳೆ ಸಂಸದ ಜಿ.ಎಸ್.ಬಸವರಾಜು ಅವರಿಗೆ ನಮ್ಮ ಸಮಾಜ ಆಶೀರ್ವಾದ ಮಾಡಿದೆ. ಹಾಗಾಗಿ, ಹಿಂದುಳಿದ ವರ್ಗಗಳಿಗೆ ಶಕ್ತಿ ನೀಡುವ ನಿಟ್ಟಿನಲ್ಲಿ ನನಗೆ ಅವಕಾಶ ಮಾಡಿಕೊಡಲಿ. ಹಿರಿಯೂರಿನಲ್ಲಿ ಬಿಜೆಪಿ ಬಾವುಟ ಹಾರಿಸಿದಂತೆ ಶಿರಾದಲ್ಲಿ ಬಿಜೆಪಿ ಬಾವುಟ ಹಾರಿಸಲು ಸಿದ್ಧರಿದ್ದೇವೆ ಎಂದರು. ಕಾಂಗ್ರೆಸ್, ಜೆಡಿಎಸ್ ಕುಂಚಿಟಿಗ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಬಹುತೇಕ ಖಚಿತ. ಕ್ಷೇತ್ರದಲ್ಲಿ ಕಾಡುಗೊಲ್ಲ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಒಂದು ವೇಳೆ ಕುರುಬ ಸಮುದಾಯದ ಮಂಜುನಾಥ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶ್ರೀನಿವಾಸ್‌ಗೆ ಬಿಜೆಪಿ ಟಿಕೆಟ್ ನೀಡಿದ್ದೇ ಆದಲ್ಲಿ ಅವರು ಪ್ರಬಲ ಅಭ್ಯರ್ಥಿಯಾಗುವುದಂತೂ ನಿಶ್ಚಿತ.

ಭಾರತ ದೇಶ ನಿಂತಿರುವುದೇ ಧರ್ಮದ ಆಧಾರದ ಮೇಲೆ. ಜನರು ಊಟ, ಕೆಲಸ ಬೇಕಾದರೆ ಬಿಡ್ತಾರೆ. ಆದ್ರೆ ದೇವರನ್ನು ಬಿಡುವುದಿಲ್ಲ. ಅದರ ನಂಬಿಕೆ ಮೇಲೆ ಜೀವನ ಕಟ್ಟಿಕೊಳ್ತಾರೆ. ಹಾಗಾಗಿ, ಧರ್ಮ ಕಾರ್ಯಕ್ಕೆ ಶೇ.1 ಹಣ ನೀಡಲಾಗಿದೆ. ವೋಟ್ ಹಾಕುವುದು ಬಿಡೋದು ಜನರಿಗೆ ಬಿಟ್ಟಿದ್ದು. ಸರ್ಕಾರ ಇರುವುದರಿಂದ ಜನರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಬಿ.ಸುರೇಶ್‌ಗೌಡ ಬಿಜೆಪಿ ಜಿಲ್ಲಾಧ್ಯಕ್ಷ