ಹರಿಹರ: ನಗರದ ಡಿಆರ್‌ಎಂ ಸರ್ಕಾರಿ ಪ್ರೌಢಶಾಲೆಗೆ ಗುರುವಾರ ಭೇಟಿ ನೀಡಿದ್ದ ತಹಸೀಲ್ದಾರ್ ಪೃಥ್ವಿ ಸಾನಿಕಂ ಅಲ್ಲಿನ ಅವ್ಯವಸ್ಥೆ ಕಂಡು ಬೇಸರ ವ್ಯಕ್ತಪಡಿಸಿದರು.
ಶಾಲಾಭಿವೃದ್ಧಿ ಸಮಿತಿಯವರ ಕೋರಿಕೆ ಮೇರೆಗೆ ಶಾಲೆಗೆ ಭೇಟಿ ನೀಡಿದ್ದ ತಹಸೀಲ್ದಾರರು, ಶಾಲಾ ಆವರಣದಲ್ಲಿರುವ ಪಾಳು ಬಿದ್ದಿರುವ ಹಳೆ ಕಟ್ಟಡ ಪರಿಶೀಲಿಸಿದಾಗ ಕೊಠಡಿಗಳಲ್ಲಿ ಅಪಾರ ಪ್ರಮಾಣದಲ್ಲಿ ಬಳಸಿ ಬಿಸಾಡಿದ್ದ ಚುಚ್ಚುಮದ್ದು ಸಿರಿಂಜ್, ಮಲ-ಮೂತ್ರ ಹಾಗೂ ಇತರೆ ತ್ಯಾಜ್ಯ ಗಮನಿಸಿ ಶಾಲಾ ಆವರಣ ಹೀಗಾದರೆ ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಬೀಉಲ್ಲಾ ಮಾತನಾಡಿ, ಪಾಳುಬಿದ್ದ ಹಳೇ ಕಟ್ಟಡದ ತೆರವಿಗೆ ಪಿಡಬ್ಲ್ಯುಡಿ ಇಲಾಖೆ ಹಾಗೂ ನಗರಸಭೆಯಿಂದ ಪರವಾನಗಿ ಪಡೆಯಲಾಗಿದೆ. ಈ ಕುರಿತು ಅಗತ್ಯ ದಾಖಲೆಗಳನ್ನು ಬಿಇಒ, ಡಿಡಿಪಿಐ ಕಚೇರಿಗೆ ಕಳಿಸಿ ಹಲವು ತಿಂಗಳಾಗಿವೆ. ಆದರೂ ಈವರೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕಟ್ಟಡ ತೆರವಿಗೆ ಮುಂದಾಗದೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ದೂರಿದರು.
ಶಾಲಾ ಆವರಣದಲ್ಲಿ ಅನ್ಯರು ಪ್ರವೇಶಿಸದಂತೆ ಪೊಲೀಸ್ ಬೀಟ್ ಆಯೋಜಿಸಿಲು, ಹಳೆ ಕಟ್ಟಡವನ್ನು ತೆರವುಗೊಳಿಸುವ ಕುರಿತು ಇಲಾಖೆ ಮೇಲಾಧಿಕಾರಿಗಳಿಗೆ ಪತ್ರ ಬರೆದು ಕೋರುತ್ತೇನೆ ಎಂದು ತಹಸೀಲ್ದಾರ್ ಭರವಸೆ ನೀಡಿದರು,
ನಗರಠಾಣೆ ಪಿಎಸ್‌ಐ ಚಿದಾನಂದಪ್ಪ, ಗ್ರಾಮ ಲೆಕ್ಕಾಧಿಕಾರಿ ಎಚ್.ಜಿ.ಹೇಮಂತ್ ಕುಮಾರ್ ಹಾಗೂ ಶಿಕ್ಷಕರಿದ್ದರು.