ಸಚಿತಾ ರೈ  
ಜಿಲ್ಲೆ

ಹಣಪಡೆದು ವಂಚಿಸಿದ್ದ ಶಿಕ್ಷಕಿ ಕೊನೆಗೂ ಅಂದರ್

ಕಾಸರಗೋಡು: ಉದ್ಯೋಗ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿರುವ ಪ್ರಕರಣದ ಆರೋಪಿ, ಮಾಜಿ ಡಿವೈಎಫ್‌ಐ ನೇತಾರೆ ಹಾಗೂ ಪುತ್ತಿಗೆ ಪಂಚಾಯಿತಿ ಬಾಡೂರು ಎಎಲ್‌ಪಿ ಶಾಲಾ ಶಿಕ್ಷಕಿ ಸಚಿತಾ ರೈ(27)ಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಜ್ಯುಡಿಶಿಯಲ್ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಶರಣಾಗಲು ಕಾಸರಗೋಡಿಗೆ ಆಗಮಿಸಿದ್ದ ಈಕೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸಚಿತಾ ರೈ ವಿರುದ್ಧ ಈಗಾಗಲೇ ಹತ್ತು ಪ್ರಕರಣ ದಾಖಲಾಗಿದ್ದು, ಮತ್ತೆ ಎರಡು ಪ್ರಕರಣ ಸೇರ್ಪಡೆಯಾಗಿದೆ. ಕುಂಬ್ಡಾಜೆ ಉಬ್ರಂಗಳ ನಿವಾಸಿ ಡಯಾನಾ ಹಾಗೂ ನೆಕ್ರಾಜೆ ಮಾವಿನಕಟ್ಟೆ ನಿವಾಸಿ ರಹಿಯಾನತ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಕಾಸರಗೋಡಿನ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿ ಹುದ್ದೆ ದೊರಕಿಸಿಕೊಡುವ ಭರವಸೆ ನೀಡಿ 2024 ಜ.22ರಂದು 2 ಲಕ್ಷ ರೂ. ಪಡೆದುಕೊಂಡಿರುವುದಾಗಿ ರಹಿಯಾನತ್ ದೂರಿನಲ್ಲಿ ತಿಳಿಸಿದ್ದಾರೆ.

ಕೇಂದ್ರೀಯ ವಿದ್ಯಾಲಯದಲ್ಲಿ ಯುಡಿ ಕ್ಲರ್ಕ್ ಹುದ್ದೆಗಾಗಿ ಮೂರು ಲಕ್ಷ ರೂ. ಬೇಡಿಕೆಯಿರಿಸಿದ್ದು, ಇದರಲ್ಲಿ 1.48 ಲಕ್ಷ ರೂ. ಪಡೆದುಕೊಂಡಿರುವುದಾಗಿ ಡಯಾನಾ ದೂರಿನಲ್ಲಿ ತಿಳಿಸಿದ್ದಾರೆ. ಸಚಿತಾ ರೈ ಬಂಧನಕ್ಕಾಗಿ ಯುವಮೋರ್ಚಾ ಕುಂಬಳೆ ಪೊಲೀಸ್ ಠಾಣೆಯಲ್ಲಿ ಗುರುವಾರ ಧರಣಿ ನಡೆಸಿದ್ದು, ಪ್ರತಿಪಕ್ಷಗಳ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸಚಿತಾ ರೈ ಬಂಧನವಾಗಿದೆ.