ಹುಬ್ಬಳ್ಳಿ : ವಿದ್ಯಾರ್ಥಿಯಲ್ಲಿ ಅಡಗಿರುವ ಪ್ರತಿಭೆ ಕಂಡು ಹಿಡಿದು, ಅದು ವ್ಯಕ್ತಗೊಂಡು ಅರಳಲು ಪ್ರೋತ್ಸಾಹ ನೀಡುವ ಜತೆಗೆ ಆ ಪ್ರತಿಭೆಯು ಪರಿಪೂರ್ಣವಾಗಿ ವಿಕಸನಗೊಂಡು ಒಂದು ಮೂರ್ತಿರೂಪಕ್ಕೆ ಬರುವವರೆಗೆ ತಾಳ್ಮೆಯಿಂದ ಶ್ರಮಿಸಬೇಕಾದ್ದು ಸಮರ್ಥ ಶಿಕ್ಷಕನ ಜವಾಬ್ದಾರಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಧಾರವಾಡ ಜಿಲ್ಲಾ ಪ್ರಾಚಾರ್ಯರರ ಸಂಘ ಸಹಯೋಗದಲ್ಲಿ ನಗರದ ಪ್ರೇರಣಾ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಧಾರವಾಡ ಜಿಲ್ಲೆಯ 2025-26ನೇ ಶೈಕ್ಷಣಿಕ ವರ್ಷ ಪ್ರಾರಂಭೋತ್ಸವದ ಪ್ರಥಮ ಪ್ರಾಚಾರ್ಯರ ಸಭೆ ಉದ್ಘಾಟಿಸಿ, ಅವರು ಮಾತನಾಡಿದರು.
ವಿದ್ಯೆ ಸಾಹಸ ಪ್ರವೃತ್ತಿಯ ಮೂಲ ಸೆಲೆ. ಎಡರುಗಳನ್ನು ಸ್ವಾಗತಿಸಿ ಎದುರಿಸುವುದು ಛಲದ ಪ್ರತೀಕ. ಸಮರ್ಥ ವಿದ್ಯಾಭ್ಯಾಸ ಪದ್ಧತಿಯು ಧಾರವಾಡ ಜಿಲ್ಲೆಯ ವಿದ್ಯಾಕಾಶಿ ಫಲ. ಮೌಲ್ಯಶಿಕ್ಷಣವನ್ನು ಪ್ರತ್ಯಕ್ಷವಾಗಿ ಕಾರ್ಯಗತ ಮಾಡಬೇಕಾದವರು ಶಿಕ್ಷಕರು. ಮೌಲ್ಯಗಳು ಪಠ್ಯಕ್ರಮದಲ್ಲಿ ಇಲ್ಲದಿದ್ದರೂ ಅವುಗಳ ಮಹತ್ವದ ಅರಿವು ಮೂಡಿಸುವಂತಹ ಪಠ್ಯೇತರ ಕಾರ್ಯಕ್ರಮ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ರ್ಯಾಂಕ್ ಬಂದಿರುವ ವಿದ್ಯಾರ್ಥಿಗಳಾದ ಇನಿಷ್ಕಾ ನಡುಗಡ್ಡಿ, ನಾಗವೇಣಿ ರಾಯಚೂರ, ಸುಮಿತ್ ಕಿಶೋರಕುಮಾರ ರಶಿನ್ಕರ್, ಭುವಿ ಸಿ. ಶಹಾ ಅವರನ್ನು ಸನ್ಮಾನಿಸಲಾಯಿತು.
ಧಾರವಾಡ ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಾಚಾರ್ಯರ ಸಂಘದ ನಿರ್ದೇಶಕ ಪ್ರೊ. ಶಶಿಧರ ತೊಠಕರ ಹಾಗೂ ಧಾರವಾಡ ಜಿಲ್ಲೆಯ ಪಿಯು ಫಲಿತಾಂಶ 23ನೇ ಸ್ಥಾನದಿಂದ 17ನೇ ಸ್ಥಾನಕ್ಕೆ ಸುಧಾರಣೆಯಾಗಿರುವ ನಿಮಿತ್ತ ಉಪನಿರ್ದೇಶಕರಾದ ಕೆ.ಪಿ ಸುರೇಶ ಅವರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಡಿ. ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಸಂದೀಪ ಬೂದಿಹಾಳ, ನಿರ್ದೇಶಕರಾದ ಟಿ.ಪಿ. ನಾರಾಯಣಕರ್, ಪ್ರೇರಣಾ ಕಾಲೇಜಿನ ಪ್ರಾಚಾರ್ಯ ಕುಮಾರಸ್ವಾಮಿ ಮೇವುಂಡಿಮಠ, ಕಚೇರಿ ಶಾಖಾಧಿಕಾರಿ ವರಾಹ ವೆಂಕಟಗಿರಿ, ಪ್ರಾ. ಅಶೋಕ ಸವಣೂರ ಹಾಗೂ ಇತರರು ಉಪಸ್ಥಿತರಿದ್ದರು.