ಜಿಲ್ಲೆ

ನ್ಯಾಯಯಾತ್ರೆ ತಡೆದದ್ದು ರಾಜಕೀಯ ಪ್ರೇರಿತ

ವಿರಾಜಪೇಟೆ: ರಾಹುಲ್ ಗಾಂಧಿ ಅವರ ಯಾತ್ರೆ ಎಂದರೆ ಎಲ್ಲರೂ ಹೆದರುವುದರಿಂದ ಅವರ ಯಾತ್ರೆಯನ್ನು ಅಸ್ಸಾಂನಲ್ಲಿ ತಡೆಯಲಾಗಿದೆ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.

ವಿರಾಜಪೇಟೆಯಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾತ್ರೆ ತಡೆದಿದ್ದು ರಾಜಕೀಯ ಪ್ರೇರಿತ ಕ್ರಮ. ಯಾತ್ರೆ ಮಾಡಲು ಎಲ್ಲರಿಗೂ ದೇಶದಲ್ಲಿ ಅವಕಾಶ ಇದೆ. ಯಾತ್ರೆ ಮಾಡುವಾಗ ಸರ್ಕಾರಗಳು ಅವಕಾಶ ಕೊಡಬೇಕು. ನಾವೂ ಪ್ರತಿನಿತ್ಯ ರಾಮನ ಭಜನೆ ಮಾಡುತ್ತೇವೆ. ರಾಮ ಕೇವಲ ಒಂದು ಪಕ್ಷಕ್ಕೆ ಸಂಬಂಧಪಟ್ಟವನಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರಾಮ ಇಡೀ ದೇಶಕ್ಕೆ ಬೇಕಾಗಿರುವ ಆದರ್ಶ ವ್ಯಕ್ತಿ. ರಾಮನ ಬಗ್ಗೆ ಎಲ್ಲರಿಗೂ ಗೌರವ ಇದೆ. ಮಹಾತ್ಮ ಗಾಂಧೀಜಿ ಅವರೂ ಎಲ್ಲ ಧರ್ಮದವರಿಗೂ ರಾಮ ಆದರ್ಶ ವ್ಯಕ್ತಿ ಎಂದಿದ್ದಾರೆ. ಅದರಂತೆ ನಮ್ಮ ಕಡೆಗಳಲ್ಲಿ ಸೋಮವಾರ ಅನೇಕ ಮುಸ್ಲಿಮರು ತಮ್ಮ ಮಸೀದಿಗಳಲ್ಲಿ ರಾಮನ ಫೋಟೋ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಇಂತಹ ರಾಮ ನಮಗೆ ಬೇಕಾಗಿರುವುದು ಎಂದ ಅವರು, ಈಗ ದೇಶದಲ್ಲಿ ರಾಜಕೀಯವಾಗಿ ರಾಮನನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇಂತಹ ಕೃತ್ಯಗಳನ್ನು ಯಾರೂ ಒಪ್ಪುವುದಿಲ್ಲ ಎಂದು ಹೇಳಿದರು.