ಜಿಲ್ಲೆ

ಕನ್ನಡ ಪ್ರೇಮ ಬೆಳೆದಾಗ ಮಾತ್ರ ಭವಿಷ್ಯದಲ್ಲಿ ಕನ್ನಡದ ಉಳಿವು ಸಾಧ್ಯ; ಕೆ.ಜಯಲಕ್ಷ್ಮಿ

ಮಡಿಕೇರಿ: ಮಕ್ಕಳ ಮನದಲ್ಲಿ ಕನ್ನಡ ಪ್ರೇಮ ಬೆಳೆದಾಗ ಮಾತ್ರ ಭವಿಷ್ಯದಲ್ಲಿ ಕನ್ನಡದ ಉಳಿವು ಸಾಧ್ಯವಿದೆ. ಕನ್ನಡ ಭಾಷೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವಲ್ಲಿ ಪೋಷಕರ ಪಾತ್ರ ಪ್ರಮುಖವಾಗಿದ್ದು, ಪಠ್ಯದಲ್ಲಿ ಕನ್ನಡವನ್ನು ನಿರ್ಲಕ್ಷಿಸಬಹುದು ಎಂಬ ಅನೇಕ ವಿದ್ಯಾರ್ಥಿಗಳ ಮನದಲ್ಲಿರುವ ಮನೋಭಾವ ನಿವಾರಣೆಯಾಗಬೇಕಾಗಿದೆ ಎಂದು ಉಪನ್ಯಾಸಕಿ, ಲೇಖಕಿ ಕೆ.ಜಯಲಕ್ಷ್ಮಿ ಅಭಿಪ್ರಾಯಪಟ್ಟರು.


ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ರೋಟರಿ ಸಭಾಂಗಣದಲ್ಲಿ ಆಯೋಜಿತ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಲ್ಲಿ ಕನ್ನಡದ ಅರಿವು ವಿಚಾರ ಕುರಿತಂತೆ ಮಾತನಾಡಿದ ಅವರು, ಅಂಕಗಳ ವಿಚಾರಕ್ಕೆ ಬಂದಾಗ ಅನೇಕ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಬಗ್ಗೆ ತೀರಾ ನಿರ್ಲಕ್ಷ್ಯವಿದೆ. ಕನ್ನಡದಲ್ಲಿ ಕಡಮೆ ಅಂಕ ಪಡೆದರೂ ನಿಭಾಯಿಸಬಹುದು ಎಂಬ ತಪ್ಪು ಕಲ್ಪನೆಯಿದೆ. ಪರರಾಜ್ಯಗಳಲ್ಲಿ ಆಯಾ ರಾಜ್ಯ ಭಾಷೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ತೀವ್ರ ತುಡಿತವಿದ್ದರೆ ಕರ್ನಾಟಕದಲ್ಲಿ ಮಾತ್ರ ವಿದ್ಯಾರ್ಥಿಗಳಲ್ಲಿ ಈ ರಾಜ್ಯದ ಪ್ರಮುಖ ಭಾಷೆಯನ್ನು ಕಲಿಯುವ ಬಗ್ಗೆ ತಾತ್ಸಾರ ಭಾವನೆ ಕಂಡುಬರುತ್ತಿದೆ. ಕನ್ನಡವನ್ನು ನಾವು ನಿರ್ಲಕ್ಷಿಸಬಹುದು ಎಂಬ ತಪ್ಪು ಕಲ್ಪನೆ ಹೆಚ್ಚಾಗುತ್ತಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸಬೇಕು. ಕನ್ನಡ ಭಾಷೆಯನ್ನು ಕೂಡ ಪ್ರಮುಖ ಭಾಷೆಯನ್ನಾಗಿ ಓದಿ ಬರೆಯುವಂತೆ ಮಕ್ಕಳಲ್ಲಿ ಉತ್ಸಾಹ ತುಂಬಬೇಕೆಂದು ಹೇಳಿದರು.


ನಾಲಗೆಯಲ್ಲಿ ಎಷ್ಟೇ ಭಾಷೆಗಳು ಹರಿದಾಡಿದರೂ ಮನದ ಭಾಷೆ ಕನ್ನಡವಾಗಿದ್ದರೆ ಮಾತ್ರ ಕನ್ನಡದ ಉಳಿವು ಸಾಧ್ಯವಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸರಿಯಾದ ಅರ್ಥವಿಲ್ಲದ ಅನೇಕ ಸಾಹಿತ್ಯಗಳು ಮತ್ತು ಸಾಹಿತಿಗಳು ಸೃಷ್ಟಿಯಾಗುತ್ತಿದ್ದಾರೆ. ಸೂಕ್ತ ಮಾರ್ಗದರ್ಶನವಿಲ್ಲದ ಇಂಥ ಸಾಹಿತ್ಯ ರಚನೆಯಿಂದ ಕನ್ನಡದ ಬೆಳವಣಿಗೆ ಸಾಧ್ಯವಾಗಲಾರದು ಎಂದೂ ಹೇಳಿದರು.


ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ ಮಾತನಾಡಿ, ಇಂಗ್ಲೀಷ್ ಭಾಷಾ ವ್ಯಾಮೋಹದಿಂದ ತಪ್ಪು ಉಚ್ಚಾರಣೆಯಲ್ಲಿ ಭಾಷೆಯನ್ನು ಪ್ರಯೋಗಿಸುವುದಕ್ಕಿಂತ ಮನದ ಭಾಷೆಯಾಗಿ ಸಂವಹನಕ್ಕೂ ಸುಲಭವಾಗಿರುವ ಕನ್ನಡವನ್ನೇ ಮಾತಿನಲ್ಲಿ ಬಳಸುವುದು ಸೂಕ್ತ. ಶಾಲೆಗಳಲ್ಲಿಯೇ ಮೊದಲು ಕನ್ನಡದ ಮಹತ್ವದ ಬಗ್ಗೆ ತಿಳಿಸಿಹೇಳುವ ವ್ಯವಸ್ಥೆ ಕಡ್ಡಾಯವಾಗಿ ಜಾರಿಯಾಗಬೇಕೆಂದು ನುಡಿದರು.


ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ರೋಟರಿ ಪಬ್ಲಿಕ್ ಇಮೇಜ್ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ಇತರರಿದ್ದರು.