ಜಿಲ್ಲೆ

ಸಮೀಕ್ಷೆ ಆಗಬೇಕಿರೋದು ಜಾತಿಯದ್ದಲ್ಲ; ಬೆಳೆ ಹಾನಿಯದ್ದು...! ರಾಜ್ಯ ಸರ್ಕಾರದ ವಿರುದ್ಧ ಸಂಸದ ರಮೇಶ ಜಿಗಜಿಣಗಿ ವಾಗ್ದಾಳಿ

ವಿಜಯಪುರ: ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದಂತೆ ಮಳೆಯಾಗುತ್ತಿದ್ದು ಎಲ್ಲೆಡೆ ಪ್ರವಾಹ ಭೀತಿ ಎದುರಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಸಂದರ್ಭದಲ್ಲಿ ಬೆಳೆ ಹಾನಿ- ಜೀವ ಹಾನಿ ಸಮೀಕ್ಷೆ ಮಾಡಬೇಕಾದ ರಾಜ್ಯ ಸರ್ಕಾರ ಜಾತಿ ಸಮೀಕ್ಷೆಯಂಥ ವ್ಯರ್ಥ ಪ್ರಲಾಪದಲ್ಲಿ ತೊಡಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ವಾಗ್ದಾಳಿ ನಡೆಸಿದರು.

ಮಳೆಯಿಂದಾಗಿ ಹಾನಿಯಾದ ಬೆಳೆ, ರಸ್ತೆ, ಜೀವ ಹಾನಿ ಕುರಿತು ಸಮೀಕ್ಷೆ ನಡೆಸಬೇಕಿರುವುದು ಸದ್ಯದ ಅನಿವಾರ್ಯತೆ. ಅದನ್ನು ಲೆಕ್ಕಿಸದೇ ಜಾತಿ ಸಮೀಕ್ಷೆ ನಡೆಸುತ್ತಿರುವುದು ಖೇದಕರ. ಇದೊಂದು ರಾಜ್ಯದ ಜನರ ದಿಕ್ಕು ತಪ್ಪಿಸುವ ತಂತ್ರಗಾರಿಕೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹರಿಹಾಯ್ದರು.

ರಾಜ್ಯ ಸರ್ಕಾರ ಜನರ ಸಂಕಷ್ಟ ಆಲಿಸುತ್ತಿಲ್ಲ. ಜನರ ಬಳಿಗೆ ಹೋಗಲು ಶಾಸಕರಿಗೆ ಮುಖವಿಲ್ಲ. ಹಳ್ಳಿಗಳಿಗೆ ಹೋಗಬೇಕೆಂದರೆ ಕಾರ್‌ಗಳಿಗೆ ಇಂಧನ ತುಂಬಿಸಲು ಶಾಸಕರ ಬಳಿ ಹಣ ಇಲ್ಲ. ಹಾಗೊಂದು ವೇಳೆ ಹೋದರೂ ರಸ್ತೆಗಳೇ ಸರಿಯಿಲ್ಲ, ಆದರೂ ಕಷ್ಟಪಟ್ಟು ಹೋದೇನೆಂದರೆ ಜನರಿಗೆ ಪರಿಹಾರ ನೀಡಲು ಕೈಯಲ್ಲಿ ಬಿಡಿಗಾಸು ಇಲ್ಲದ ದುಃಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಶಾಸಕರು ಜನರ ಸಂಕಷ್ಟ ಆಲಿಸುತ್ತಿಲ್ಲ. ಉಸ್ತುವಾರಿ ಸಚಿವರುಗಳು ಕೆಡಿಪಿ ಸಭೆಯನ್ನೇ ಮರೆತಿದ್ದಾರೆ. ಕೆಡಿಪಿ ಸಭೆ ಕರೆದರೆ ಜನರ ಅಳಲು ತೋಡಿಕೊಳ್ಳಲು ನಾನೂ ಸಹ ಬೆಕ್ಕು ಇಲಿಗೆ ಕಾಯ್ದು ಕುಳಿತಂತೆ ಕುಳಿತಿದ್ದೇನೆ. ಆದರೆ ಕೆಡಿಪಿ ಸಭೆಗಳೇ ಆಗುತ್ತಿಲ್ಲ ಎಂದು ಹರಿಹಾಯ್ದರು.

ಸಂಕಷ್ಟದ ಸ್ಥಿತಿಯಲ್ಲಿ ಜನರ ನೆರವಿಗೆ ಧಾವಿರಬೇಕಿರುವುದು ರಾಜ್ಯ ಸರ್ಕಾರದ ಕರ್ತವ್ಯ. ಶಾಸಕರು ಜನರಿಗೆ ಮುಖ ತೋರಿಸಲಾಗದೆ ಪಲಾಯಾನಗೈಯುತ್ತಿದ್ದಾರೆ. ಜನರ ಕೈಗೆ ಸಿಗುತ್ತಿಲ್ಲ. ಗ್ರಾಮೀಣ ಭಾಗಗಳಲ್ಲಿ ಜಮೀನುಗಳಿಗೆ ಹೋಗಲು ರಸ್ತೆಗಳೇ ಇಲ್ಲ. ಸೇತುವೆಗಳು ಮುಳುಗಡೆಯಾಗಿವೆ. ಮನೆಗಳು ಬಿದ್ದು ಬದುಕು ದುಸ್ತರವಾಗಿದೆ. ಜನರ ಕಣ್ಣೀರು ಆಲಿಸದ ಸರ್ಕಾರದ ವಿರುದ್ಧ ಜನ ಹಿಡಿಶಾಪ ಹಾಕುತ್ತಿದ್ದಾರೆ. ಖಂಡಿತ ಜನರ ಶಾಪ ಈ ಸರ್ಕಾರಕ್ಕೆ ತಟ್ಟದೇ ಇರಲ್ಲ ಎಂದು ಜಿಗಜಿಣಗಿ ಆಕ್ರೋಶಭರಿತವಾಗಿ ನುಡಿದರು.

ಮಳೆ ಉತ್ತಮವಾಗಿದ್ದರಿಂದ ಈ ಬಾರಿ ಬೆಳೆ ಚೆನ್ನಾಗಿ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಅತಿಯಾಗಿ ಸುರಿದ ಮಳೆ ನಷ್ಟವನ್ನುಂಟು ಮಾಡಿತು. ಮೆಕ್ಕೆಜೋಳ, ಹತ್ತಿ ಸೇರಿದಂತೆ ಹಲವು ಬೆಳೆಗಳು ಹಾನಿಯಾಗಿವೆ. ಕಬ್ಬಿನ ಗದ್ದೆಗಳೆಲ್ಲ ಜಲಾವೃತಗೊಂಡಿವೆ. ತೊಗರಿ ಸಂಪೂರ್ಣ ನಾಶವಾಗಿದೆ. ಹೀಗಾಗಿ ಕೂಡಲೇ ಸರ್ಕಾರ ಹಾನಿಯ ಸಮೀಕ್ಷೆ ನಡೆಸಿ ಪರಿಹಾರ ಕಲ್ಪಿಸಬೇಕು. ಇಲ್ಲವಾದರೆ ಜನರೇ ರೊಚ್ಚಿಗೆದ್ದು ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಸೃಷ್ಠಿಯಾಗಲಿದೆ. ಈಗಾಗಲೇ ಈ ಕುರಿತು ರೈತರು ತಮ್ಮೊಂದಿಗೆ ಚರ್ಚಿಸಿ ಆರೋಪಗಳ ಸುರಿಮಳೆ ಸುರಿಸಿದ್ದಾರೆಂದು ಜಿಗಜಿಣಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಬಿಜೆಪಿ ಜಿಲ್ಲಾ ಕೋಶಾಧ್ಯಕ್ಷ ಭೀಮಾಶಂಕರ ಹದನೂರ, ವಿಜಯ ಜೋಶಿ ಇದ್ದರು.