ನಂದಗುಡಿ: ಸುಪ್ರೀಕೋರ್ಟ್ ಆದೇಶ ಉಲ್ಲಂಘಿಸಿ ಸಚಿವರನ್ನಾಗಿ ಮಾಡಲು ಮುಂದಾಗುತ್ತಿರುವುದಾಗಿ ಪಿಐಎಲ್ ಸಲ್ಲಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆಯೇ ಹೊರತು ಕೋರ್ಟ್‌ನಿಂದ ಯಾವುದೇ ನೋಟಿಸ್ ಜಾರಿಯಾಗಿಲ್ಲ, ನಾನು ಕೋರ್ಟ್ ಆದೇಶವನ್ನು ಉಲ್ಲಂಸಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ನಂದಗುಡಿ ಹೋಬಳಿ ಬೈಲನರಸಾಪುರದಲ್ಲಿ ಮಂಗಳವಾರ ಹಿಂದುಳಿದ ವರ್ಗದ ಬಡ ಕುಟುಂಬಕ್ಕೆ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ವಿತರಿಸಿ ಮಾತನಾಡಿದರು.
ಅನರ್ಹ ಶಾಸಕರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಸಾಂವಿಧಾನಿಕ ಹುದ್ದೆ ನೀಡುವಂತೆ ಸುಪ್ರೀಂ ಆದೇಶ ನೀಡಿದ್ದು, ಅದರಂತೆ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದೆ. ನಾಮಪತ್ರ ಕ್ರಮಬದ್ಧವಾಗಿ ಅಂಗೀಕಾರವಾಗಿದ್ದು, ವಿಧಾನ ಸಭೆಯಲ್ಲಿ ಶಾಸಕರು ಆಯ್ಕೆ ಮಾಡಿದ್ದರಿಂದ ವಿಧಾನ ಪರಿಷತ್ ಸದಸ್ಯನಾಗಿ ಅಯ್ಕೆಯಾಗಿದ್ದೇನೆ ಎಂದರು.
ಬಡವರ ಸೇವೆಗೆ ಅಧಿಕಾರವೇ ಬೇಕೆಂದಿಲ್ಲ, ಅಧಿಕಾರವಿಲ್ಲದಿದ್ದರೂ ಜನರ ಸೇವೆಗೆ ನಾನು ಸದಾ ಸಿದ್ದನಿದ್ದೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ಉಚಿತವಾಗಿ ಲಭ್ಯವಾಗಲೆಂಬ ದೃಷ್ಟಿಯಿಂದ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದಿದ್ದಾರೆ. ಈ ಯೋಜನೆಯಿಂದ ವಾರ್ಷಿಕ ಪ್ರತೀ ಕುಟುಂಬ 5 ಲಕ್ಷ ರೂ.ವಿಮೆ ಪಡೆಯಬಹುದಾಗಿದೆ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ನಂದಗುಡಿ ಜಿಪಂ ಸದಸ್ಯ ಸಿ. ನಾಗರಾಜ್, ಹೊಸಕೋಟೆ ಟೌನ್ ಬಿಜೆಪಿ ಅಧ್ಯಕ್ಷ ಸಿ. ಜಯರಾಜ್, ತಾಲೂಕು ಗ್ರಾಮಾಂತರ ಅಧ್ಯಕ್ಷ ಕೆ. ಸತೀಶ್, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಸುಜಾತಾ ನಾಗರಾಜ್ ಮತ್ತಿತರರು ಇದ್ದರು.