ಎಂ.ಎಸ್.ರವಿಕುಮಾರ್ ಕೆ.ಆರ್.ನಗರ
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಹಳೇಎಡತೊರೆಯ ಶ್ರೀ ಮೀನಾಕ್ಷಿ ಸಮೇತ ಶ್ರೀ ಅರ್ಕೇಶ್ವರ ಸ್ವಾಮಿ ತಾಲೂಕಿನ ಜನರ ಆರಾಧ್ಯ ದೈವವಾಗಿ ಪ್ರಸಿದ್ಧಿ ಪಡೆದಿದ್ದು, ತನ್ನದೇ ಆದ ಮಹತ್ವ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿದೆ.
ಕ್ಷೇತ್ರವು ಮೈಸೂರಿನಿಂದ 47 ಕಿಮೀ ಹಾಗೂ ಕೆ.ಆರ್.ನಗರದ ಬಸ್ ನಿಲ್ದಾಣದಿಂದ 2 ಕಿಮೀ ದೂರದಲ್ಲಿದೆ. ಮೈಸೂರು-ಹಾಸನ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ನಾಡಿನ ಜೀವನದಿ ಕಾವೇರಿ ನದಿಯ ದಂಡೆಯಲ್ಲಿದ್ದು, ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಇದು ಒಂದಾಗಿ ಪ್ರಕೃತಿ ಸೊಬಗಿನ ಜತೆಗೆ ದೇವಾಲಯವೂ ಭಕ್ತರನ್ನು ಆಕರ್ಷಿಸುತ್ತಿದೆ.
ಮಹಾಶಿವರಾತ್ರಿಯ ಮಾರನೇ ದಿನ ಗರ್ಭಗುಡಿಯಲ್ಲಿರುವ ಶ್ರೀಅರ್ಕೇಶ್ವರ ಸ್ವಾಮಿ ವಿಗ್ರಹದ ಮೇಲೆ ಸೂರ್ಯರಶ್ಮಿ ಬೀಳುವುದು ಇಲ್ಲಿನ ವಿಸ್ಮಯವಾಗಿದೆ. ಪ್ರತಿವರ್ಷ ರಥಸಪ್ತಮಿಯಂದು ನಡೆಯುವ ವಾರ್ಷಿಕ ಬ್ರಹ್ಮರಥೊತ್ಸವ ಹೆಸರುವಾಸಿಯಾಗಿದೆಯಲ್ಲದೆ ದೇವಾಲಯದ ಕೂಗಳತೆ ದೂರದಲ್ಲಿ ಮುಸ್ಲಿಮರ ಖಾದರ್ ಲಿಂಗಾವಳಿಯವರ ದರ್ಗಾ ಇರುವುದರಿಂದ ಸರ್ವಧರ್ಮ ಸಮನ್ವಯ ಕ್ಷೇತ್ರವಾಗಿ ಖ್ಯಾತಿ ಪಡೆದಿದೆ. ಮುಜರಾಯಿ ಇಲಾಖೆಯ ನಿರ್ವಹಣೆಯಲ್ಲಿರುವ ದೇಗುಲಕ್ಕೆ ನಿತ್ಯ ನೂರಾರು ಭಕ್ತರು ಭೇಟಿ ನೀಡಿ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪೂಜೆ ಸಲ್ಲಿಸುತ್ತಾರೆ.
ಐತಿಹ್ಯ: ಪಟ್ಟಣದಿಂದ ದೇವಾಲಯ 2 ಕಿಮೀ ದೂರದಲ್ಲಿರುವ ಹಳೇ ಎಡತೊರೆಯ ಕಾವೇರಿ ನದಿ ದಡದಲ್ಲಿದೆ. ದಕ್ಷಿಣ ಭಾರತದ ಪುಣ್ಯನದಿ ಎಂದೆನಿಸಿರುವ ಕಾವೇರಿ ತಾನು ಹರಿಯುವ ಉದ್ದಕ್ಕೂ ಹಲವಾರು ಪುಣ್ಯ ಯಾತ್ರಾಸ್ಥಳಗಳನ್ನೂ ಹೊಂದಿದೆ. ಎಡತೊರೆ ಕ್ಷೇತ್ರದಲ್ಲಿ ಕಾವೇರಿ ನದಿಯು ಎಡಕ್ಕೆ ತಿರುಗಿ ಹರಿಯುವುದರಿಂದ ಈ ಕ್ಷೇತ್ರಕ್ಕೆ ಎಡತೊರೆ ಎಂಬ ಹೆಸರು ಬಂದಿದೆ. ಪುರಾಣ ಪ್ರಸಿದ್ಧ ಐತಿಹಾಸಿಕ ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯದ ಬಳಿ 9ನೇ ಶತಮಾನಕ್ಕೆ ಸೇರಿದ ಶಾಸನ ದೊರೆತಿದೆ. 11ನೇ ಶತಮಾನದಲ್ಲಿ ರಾಜೇಂದ್ರ ಚೋಳನು ವಾಸವಾಗಿದ್ದ ಈ ಪ್ರದೇಶದಲ್ಲಿ ದೇವಾಲಯದ ನಿರ್ಮಾಣಕ್ಕಾಗಿ ಅಂಗೈಕಾರನ್ ಎಂಬುವವನು ಈಶ್ವರ ದೇವಾಲಯಕ್ಕೆ ಭೂಮಿಯನ್ನು ದಾನ ಮಾಡಿದನೆಂದು ತಮಿಳು ಶಾಸನದಿಂದ ತಿಳಿದು ಬಂದಿದೆ.
ಹಿನ್ನೆಲೆ: ನದಿ-ಪುಷ್ಕರಣಿಗಳ ಹಿರಿಮೆ ಪುಣ್ಯ ಕ್ಷೇತ್ರಗಳಲ್ಲಿ ಹೆಚ್ಚಿದೆ. ಅರ್ಕ ಪುಷ್ಕರಣಿಯಲ್ಲಿ ಹೇಳಿರುವಂತೆ ಸ್ವತಃ ಸೂರ್ಯದೇವ ತನ್ನ ಮಗಳು ಯಮುನೆಯನ್ನು ಪಾಪದೃಷ್ಟಿಯಿಂದ ನೋಡಿದ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ಶಿವನನ್ನು ಕುರಿತು ತಪಸ್ಸು ಮಾಡಿದನು. ನಂತರ ಎಡತೊರೆಯಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿ ಪುಷ್ಕರಿಣಿ ನಿರ್ಮಿಸಿದನೆಂಬುದು ಪ್ರತೀತಿ.
ಗಂಗರ ಕಾಲದಲ್ಲಿ ಅರ್ಕೇಶ್ವರ ಸ್ವಾಮಿಯ ದೇವಾಲಯ ನಿರ್ಮಾಣವಾಯಿತೆಂದು, ಚೋಳರ ಕಾಲದಲ್ಲಿ ಮೀನಾಕ್ಷಿ ಅಮ್ಮನವರ ದೇವಾಲಯ ನಿರ್ಮಾಣವಾಯಿತೆಂದು ಪುರಾಣಗಳು ಹೇಳಿದರೂ, ಖಚಿತ ಆಧಾರಗಳು ಇಲ್ಲ. ಮೈಸೂರು ಅರಸರ ಕಾಲದಲ್ಲಿ ದೇವಾಲಯದ ಜೀರ್ಣೋದ್ಧಾರವಾಗಿ ಅಭಿವೃದ್ಧಿಗೊಂಡಿತೆಂದು ಮಾತ್ರ ಸ್ಪಷ್ಟವಾಗುತ್ತದೆ.
ಕ್ಷೇತ್ರದ ಮಹಿಮೆ: ತಾಲೂಕಿನ ಜನತೆಯ ಆರಾಧ್ಯ ದೈವವಾಗಿರುವ ಶ್ರೀ ಅರ್ಕೇಶ್ವರಸ್ವಾಮಿ ಸನ್ನಿಧಿ ಭಕ್ತಿ ಶ್ರದ್ಧೆಯ ತಾಣವೆಂದು ಪ್ರಸಿದ್ಧಿ ಪಡೆದಿದೆ. ಸುಂದರ ತಾಣದಲ್ಲಿರುವ ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯ ಶ್ರಿ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮರುನಿರ್ಮಾಣವಾಯಿತೆಂಬ ಹೇಳಲಾಗುತ್ತದೆ.
ರಾಜಗೋಪುರ, ಪ್ರವೇಶದ್ವಾರದ ಮೊದಲು ಗರುಡಗಂಬ, ಅದಕ್ಕೆ ಹೊಂದಿಕೊಂಡಂತೆ ನಂದಿ ವಿಗ್ರಹ, ಹೊರಾಂಗಣ, ಸೂರ್ಯವಿಗ್ರಹ, ಪ್ರಾಕಾರದದಲ್ಲಿರುವ ನೂರಾರು ಲಿಂಗಗಳು, ಅರ್ಕೇಶ್ವರನಿಗೆ ಶೈವಾಗಮದ ರೀತ್ಯ ಪೂಜೆ ಸಲ್ಲಿಸುತ್ತಿರುವುದು, ಪ್ರವೇಶ ದ್ವಾರದ ಎಡಭಾಗದಲ್ಲಿ ಸೂರ್ಯ ದೇವರು, ಈಶಾನ್ಯ ಭಾಗದಲ್ಲಿ ಯಾಗಶಾಲೆ, ಅರ್ಕೇಶ್ವರನ ಹಿಂಭಾಗದಲ್ಲಿ ಮೀನಾಕ್ಷಿ, ಚಂಡಿಕೇಶ್ವರ, ಗಿರಿಜಾ ಕಲ್ಯಾಣ ಮಂಟಪಗಳಿಂದ ಈ ದೇವಾಲಯ ಕೂಡಿದೆ.
ಸೂರ್ಯನು ಇಲ್ಲಿಯೇ ಇದ್ದು ಕಾವೇರಿ ತೊರೆಯಲ್ಲಿ ಮಿಂದು ಮಡಿಯಾಗಿ ಶಿವನನ್ನು ಕುರಿತು ತಪಸ್ಸು ಆಚರಿಸುತ್ತಿದ್ದ ಕಾರಣ ಇಲ್ಲಿಯ ಶಿವನಿಗೆ ಅರ್ಕೇಶ್ವರನೆಂಬ ಹೆಸರು ಬಂದಿತೆಂದು ಹೇಳಲಾಗುತ್ತದೆ. ಮಹಾಶಿವರಾತ್ರಿಯ ದಿನ ಸೂರ್ಯನ ತಪಸ್ಸಿಗೆ ಒಲಿದ ಪರಮೇಶ್ವರನು ಇಲ್ಲಿ ಸ್ವಯಂ ಭೂಲಿಂಗ ರೂಪದಿಂದ ಪ್ರತ್ಯಕ್ಷವಾಗಿ ಅನುಗ್ರಹಿಸಿದನಂತೆ. ಅದರ ಕುರುಹಾಗಿ ಇಂದಿಗೂ ಶಿವರಾತ್ರಿಯ ದಿನ ಸೂರ್ಯೋದಯದ ವೇಳೆ ಸೂರ್ಯನ ಕಿರಣಗಳು ಈ ಲಿಂಗವನ್ನು ಸ್ಪರ್ಶಿಸಿ ಪೂಜಿಸುವವು ಎಂದು ಹೇಳುತ್ತಾರೆ. ಅಮೃತ ಪುರಿ ಅಥವಾ ಭಾಸ್ಕರ ರಾಜ ಕ್ಷೇತ್ರದಲ್ಲಿ ನೆಲೆಸಿ ರಾರಾಜಿಸುತ್ತಿರುವ ಅರ್ಕೇಶ್ವರಸ್ವಾಮಿ ಬ್ರಹ್ಮರಥೋತ್ಸವವು ಪ್ರತಿ ವರ್ಷ ರಥಸಪ್ತಮಿಯ ದಿನದಂದು ನಡೆಯುತ್ತದೆ.