ಶಿರಸಿ: ಮಲೆನಾಡಿನ ತಂಪು ವಾತಾವರಣಕ್ಕೆ ಪ್ರಸಿದ್ಧಿಯಾಗಿದ್ದ ಶಿರಸಿಯಲ್ಲಿ ಈಗ ತಾಪಮಾನ ಗಣನೀಯವಾಗಿ ಏರಿಕೆಯಾಗುತ್ತಿದೆ. ಮಾರ್ಚ್ ತಿಂಗಳ ಆರಂಭದ ಈ ದಿನಗಳಲ್ಲಿಯೇ ಮಧ್ಯಾಹ್ನದ ವೇಳೆ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿರುವುದು ಬಿಸಿಲಿನ ಗಂಭೀರತೆಯನ್ನು ಸಾರಿ ಹೇಳುತ್ತಿದೆ.
ಭಾನುವಾರ ಮಧ್ಯಾಹ್ನದ ವೇಳೆ ಶಿರಸಿಯಲ್ಲಿ 37 ಡಿಗ್ರಿ ಡೆಲ್ಸಿಯಸ್ ದಾಖಲಾಗಿದೆ. ಇಲ್ಲಿಯ ಹೊಸಪೇಟೆ ರಸ್ತೆಯ ವೈದ್ಯ ಡಾ. ರವಿಕಿರಣ ಪಟವರ್ಧನ ಹವ್ಯಾಸಕ್ಕಾಗಿ ಪ್ರತಿ ದಿನ ನಗರದ ತಾಪಮಾನ ದಾಖಲಿಸುತ್ತ ಬಂದಿದ್ದಾರೆ. ಅವರು ಅಭಿಪ್ರಾಯದಂತೆ ಕಳೆದ ಮೂರು ನಾಲ್ಕು ವರ್ಷಗಳ ಈಚೆ ಶಿರಸಿಯಲ್ಲಿಯೂ ಬೇಸಿಗೆಯ ದಿನಗಳಲ್ಲಿ ತಾಪಮಾನ ಗಣನೀಯವಾಗಿ ಏರಿಕೆ ಆಗುತ್ತಿದೆೆ. ಈಗ ಮಾರ್ಚ್ ತಿಂಗಳ ಆರಂಭದಲ್ಲಿಯೇ ಇಷ್ಟೊಂದು ಪ್ರಮಾಣದಲ್ಲಿ ತಾಪಮಾನ ಏರುತ್ತಿದ್ದು, ಇದು ಶುಭ ಸೂಚನೆಯಲ್ಲ. ಮುಂದೆ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ತಾಪಮಾನ ಇನ್ನೂ ಏರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯವೂ ಇದಾಗಿರುವುದರಿಂದ ಪಾಲಕರು ಕಾಳಜಿ ವಹಿಸಿ ಅವರನ್ನು ಪರೀಕ್ಷಗೆ ಬಿಟ್ಟು ಬರುವ ಕಾರ್ಯ ಮಾಡಬೇಕು. ಅಧಿಕ ಪ್ರಮಾಣದಲ್ಲಿ ನೀರನ್ನು ಕುಡಿಯುವ ಮೂಲಕ ದೇಹದಲ್ಲಿ ಉಂಟಾಗುವ ನೀರಿನ ಕೊರತೆ ತಪ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.
ಸಾಮಾನ್ಯವಾಗಿ ಪ್ರತಿ ವರ್ಷ ಫೆಬ್ರವರಿ ತಿಂಗಳಿನಲ್ಲಿ ಅಲ್ಪ ಪ್ರಮಾಣದ ಮಳೆ ಸುರಿಯುತ್ತಿತ್ತು. ಈ ವರ್ಷ ಮಳೆಯಾಗದಿರುವುದು ಈ ರೀತಿ ಹವಾಮಾನಕ್ಕೆ ಕಾರಣವಾಗಿದೆ.
ಶಿರಸಿ ನಗರಕ್ಕೆ ಕುಡಿಯುವ ನೀರಿನ ಸರಬರಾಜು ಮಾಡುವ ಕೆಂಗ್ರೆ ಮತ್ತು ಮಾರಿಗದ್ದೆಯಲ್ಲಿ ನೀರಿನ ಹರಿವು ಕಡಿಮೆ ಆಗದಿದ್ದರೂ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಕಳೆದ ವರ್ಷ ನೀರಿನ ಕೊರತೆ ಉಂಟಾದ ಸ್ಥಳಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಲೂಕಿನಲ್ಲಿ ಇದುವರೆಗೂ ನೀರಿನ ಕೊರತೆ ಉಂಟಾಗದಿದ್ದರೂ ಮುಂದೆ ಬರಲಿರುವ ಸಮಸ್ಯೆ ತಪ್ಪಿಸಲು ಈಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.
| ಶ್ರೀಧರ ಮುಂದಲಮನಿ, ತಹಸೀಲ್ದಾರ್