ಮೈಸೂರು: ದೇಶಾದ್ಯಂತ ನಕಲಿ ಸುದ್ದಿಗಳ(ಫೇಕ್ ನ್ಯೂಸ್) ಉಪಟಳ ತೀವ್ರವಾಗಿಗಿದ್ದು, ಇಂತಹ ಸುದ್ದಿಗಳನ್ನು ಸಾರ್ವಜನಿಕರು ಮೌಲ್ಯಮಾಪನ ಮತ್ತು ಪರಿಶೀಲನೆಗೆ ಒಳಪಡಿಸಬೇಕಿದೆ ಎಂದು ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್ ಹೇಳಿದರು.
ಎಚ್.ವೈ.ಶಾರದಾ ಪ್ರಸಾದ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ದೇವಿಗೀತಂ ಚಾರಿಟಬಲ್ ಟ್ರಸ್ಟ್ ವತಿಯಿಂದ ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ‘ಪ್ರಸ್ತುತ ದಿನಮಾನದಲ್ಲಿ ಪತ್ರಿಕೋದ್ಯಮದಲ್ಲಿ ನಕಲಿ ಸುದ್ದಿಗಳು, ದುರುದ್ದೇಶಪೂರಿತ(ಪ್ರೊಪಗಾಂಡಾ) ಮತ್ತು ಸಾಮೂಹಿಕ ಭ್ರಮೆ’ ಕುರಿತು ಮಾತನಾಡಿದರು.
ಭಾರತವು ಫೇಕ್ ನ್ಯೂಸ್‌ಗಳ ಫ್ಯಾಕ್ಟರಿಯಾಗಿದೆ. ಈ ವಿಷಯದಲ್ಲಿ ಕರ್ನಾಟಕ ಸಹ ಮುಂಚೂಣಿಯಲ್ಲಿದೆ. ವ್ಯಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ ನಕಲಿ ಸುದ್ದಿಯನ್ನು ಪರಿಶೀಲನೆ ಮಾಡದೆ, ಸತ್ಯಾಸತ್ಯವನ್ನೂ ತಿಳಿದುಕೊಳ್ಳದೇ ಬೇರೆಯವರಿಗೆ ಕಳುಹಿಸಲಾಗುತ್ತದೆ. ಕುಟುಂಬ, ಕಚೇರಿ ಸಿಬ್ಬಂದಿ, ಸ್ನೇಹಿತರು ಹೀಗೆ ವಿವಿಧ ಗ್ರೂಪ್‌ನಲ್ಲಿ ಇಂತಹ ಸುಳ್ಳಿನ ಸುದ್ದಿಗಳು ಹಂಚಿಕೊಳ್ಳಲಾಗುತ್ತಿದೆ. ಜತೆಗೆ, ‘ಯಾರೋ ಕಳುಹಿಸಿದ ಸುದ್ದಿಯನ್ನು ಕಳುಹಿಸಿದೆ’ ಎಂಬುದು ಸಹ ದುರ್ಬಲ ಸಮರ್ಥನೆ ಆಗಲಿದೆ ಎಂದರು.
ರಾಜಕೀಯ ದುರುದ್ದೇಶ, ದ್ವೇಷ ಹರಡಲು, ಕಾರ್ಪೋರೇಟ್ ಸಂಸ್ಥೆಗಳ ಹಿತಾಸಕ್ತಿಗಳಿಗೆ ಅನುಗುಣವಾಗಿ ಫೇಕ್ ನ್ಯೂಸ್‌ಗಳು ತಯಾರು ಆಗುತ್ತವೆ. ಇದು ವ್ಯವಸ್ಥಿತ ಪ್ರಕ್ರಿಯೆಯಂತೆ ನಡೆಯುತ್ತಿದೆ. ಇದರ ಹಿಂದೆ ದುರುದ್ದೇಶ, ಕೆಟ್ಟ ವಿಷಯವನ್ನು ಪ್ರಚಾರ ಮಾಡುವುದು, ನಿರ್ದಿಷ್ಟ ಸಮುದಾಯದ ವಿರುದ್ಧ ನಕರಾತ್ಮಕ ಭಾವನೆ ಮೂಡಿಸುವ ಹುನ್ನಾರ ಇರುತ್ತದೆ.
ಇದಕ್ಕಾಗಿ ವ್ಯಾಟ್ಸ್‌ಆ್ಯಪ್, ಫೇಸ್‌ಬುಕ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲ ತಾಣಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಸಾಮಾಜಿಕ ಜಾಲತಾಣದ ಕಂಪನಿಗಳೂ ಸಹ ಕುಮ್ಮಕ್ಕು ಕೊಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಫೇಕ್ ವಿಡಿಯೋದಿಂದ ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ಕೋಮುಗಲಭೆ ಉಂಟಾಗಿ 25 ಜನರ ಹತ್ಯೆ ಆಯಿತು. ಆ ವಿಡಿಯೋ ಅಫ್ಘಾನಿಸ್ತಾನದ್ದಾಗಿತ್ತು. ಮಕ್ಕಳ ಅಪಹರಣಕಾರರ ಕುರಿತು ಇನ್ನೊಂದು ವಿಡಿಯೋ ಹರಿದಾಡಿತು. ಇದರಿಂದ ಗಾಬರಿಕೊಂಡ ಸಾರ್ವಜನಿಕರು ಪ್ರತ್ಯೇಕ ಪ್ರಕರಣದಲ್ಲಿ 39 ಜನರ ಮೇಲೆ ಹಲ್ಲೆ ಮಾಡಿದ್ದರು.
ಆದರೆ, ಆ ವಿಡಿಯೋ ಪಾಕಿಸ್ತಾನದ ವಿಡಿಯೋ ಆಗಿತ್ತು. ಮಕ್ಕಳ ಅಪಹರಣ ತಡೆ ಕುರಿತು ಕೈಗೊಳ್ಳಬೇಕಿರುವ ಅರಿವು ಮೂಡಿಸುವ ಸರ್ಕಾರಿ ಜಾಹೀರಾತಾಗಿತ್ತು. ಹೀಗೆ ನಿತ್ಯ ಹರಿದಾಡುತ್ತಿರುವ ಹತ್ತಾರು ಫೇಕ್‌ನ್ಯೂಸ್, ವಿಡಿಯೋಗಳು ಸಮಾಜದಲ್ಲಿ ದ್ವೇಷ, ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿವೆ ಎಂದರು.
ಸುಳ್ಳು ಸುದ್ದಿಗಳ ಕುರಿತು ಮೌಲ್ಯಮಾಪನ, ಪರಿಶೀಲನೆ, ಮತ್ತೊಮ್ಮೆ ಪರಿಶೀಲನೆ ಮಾಡಬೇಕಿರುವ ತುರ್ತು ಅಗತ್ಯ ಈಗ ಇದೆ ಎಂದರು.
ಕೇರಳ ರಾಜ್ಯದ ಕಣ್ಣೂರಿನ ಸರ್ಕಾರಿ ಶಾಲೆಯಲ್ಲಿ ಫೇಕ್ ನ್ಯೂಸ್‌ಗಳ ಫ್ಯಾಕ್ಟ್ ಚೆಕ್ ಮಾಡಲಾಗುತ್ತಿದೆ. ಸುಳ್ಳು ಸುದ್ದಿಗಳನ್ನು ಮೌಲ್ಯಮಾಪನ ಮಾಡಲಾಗುತ್ತಿದೆ. ಈ ರೀತಿ ಸಕಾರಾತ್ಮಕ ಕೆಲಸ ಎಲ್ಲೆಡೆ ನಡೆಯಬೇಕಿದೆ ಎಂದರು.
ಜಾಗತಿಕ ಪತ್ರಿಕಾ ಸ್ವಾತಂತ್ರೃ ಸೂಚ್ಯಂಕದಲ್ಲಿ ಭಾರತವು 180 ದೇಶಗಳ ಪೈಕಿ 161ನೇ ಸ್ಥಾನದಲ್ಲಿ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಮಂತ್ರಿಗಳಾದ ಇಂದಿರಾಗಾಂಧಿ, ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದ ಶಾರದಾ ಪ್ರಸಾದ್ ಅವರು ಒಬ್ಬ ಮೇಧಾವಿ ಹಾಗೂ ಕನ್ನಡಿಗರು. ಅವರ ಬದುಕು-ಸಾಹಿತ್ಯದಲ್ಲೂ ಸಾಧನೆ ಮಾಡಿದವರು.
ಆದರೆ, ಅವರ ಹೆಸರನ್ನು ಮೈಸೂರು ಮಹಾನಗರಪಾಲಿಕೆ ನಗರದ ಪ್ರಮುಖ ರಸ್ತೆ, ವೃತ್ತಕ್ಕೆ ನಾಮಕರಣ ಮಾಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಧ್ವನ್ಯಾಲೋಕದ ನಿರ್ದೇಶಕ ಪ್ರೊ.ಸಿ.ಎನ್.ಶ್ರೀನಾಥ್ ಇದ್ದರು.