ಜಿಲ್ಲೆ

ಸುಖ ಸಿಗುವುದು ವಿದ್ಯೆಯಿಂದ, ವಸ್ತುಗಳಿಂದಲ್ಲ...

ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರ ಆಶೀರ್ವಚನ

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ವಿದ್ಯಾರ್ಥಿಗಳು ಭಾರತ ದೇಶದ ಶಕ್ತಿ. ಹೀಗಾಗಿ ನಮ್ಮ ಬುದ್ಧಿ, ವಿದ್ಯೆ ಎಲ್ಲವೂ ಸಹ ದೇಶದ ಏಳಿಗೆಗೆ ಪೂರಕವಾಗಿರಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ಸದಾ ಉಪಾಸನೆ ಉಪಯೋಗ ಹಾಗೂ ಉಪದೇಶದ ಕುರಿತು ಚಿಂತಿಸಿದರೆ ಉತ್ತಮ. ಧ್ಯಾನ, ಸಾತ್ವಿಕ ಆಹಾರ, ಜಾಗೃತ ಮನೋಭಾವದಿಂದ ದೇಶಕಟ್ಟುವ ಕಾಯಕದಲ್ಲಿ ವಿದ್ಯಾರ್ಥಿಗಳೂ ನಿರತರಾಗಿರಬೇಕು ಎಂದು ಅದಮಾರು ಮಠ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಈಶಪ್ರಿಯ ತೀರ್ಥ ಶ್ರೀಪಾದರು ನುಡಿದರು.

ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟಿಸಿ, ಸುಖ ಸಿಗುವುದು ವಿದ್ಯೆಯಿಂದ. ವಸ್ತುಗಳಿಂದ ಅಲ್ಲ ಎಂದು ಆಶೀರ್ವಚನ ನೀಡಿದರು.

ಸವಾಲು ಎದುರಿಸಲು ಭಗವದ್ಗೀತೆ ಸಾಧನ

ಭಾರತೀಯ ಜ್ಞಾನ ವ್ಯವಸ್ಥಾಪನಾ ಕೇಂದ್ರ ನಿಟ್ಟೆ ಮಹಾವಿದ್ಯಾಲಯದ ನಿರ್ದೇಶಕ ಡಾ. ಸುಧೀರರಾಜ್​ ಕೆ. ಮಾತನಾಡಿ, ಭಗವದ್ಗೀತೆಯಲ್ಲಿ ನಮ್ಮ ಜೀವನದ ಯಶಸ್ಸಿಗೆ ಬೇಕಾದ ಎಲ್ಲ ಮೌಲ್ಯ ಲಭಿಸುತ್ತದೆ. ಜಗದ್ಗುರು ಶ್ರೀಕೃಷ್ಣನು ಅರ್ಜುನನಿಗೆ ಅಂದು ಮಾಡಿದ ಉಪದೇಶವು ಇಂದಿಗೂ ನಮ್ಮ ವಿದ್ಯಾರ್ಥಿಗಳ ಬದುಕಿನ ಸವಾಲುಗಳನ್ನು ಎದುರಿಸಲು ಅತ್ಯುತ್ತಮ ಸಾಧನವಾಗಿದೆ ಎಂದರು.

ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಸಿಎ ಟಿ. ಪ್ರಶಾಂತ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಕಾಂತ ಭಟ್​, ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ. ರಾಘವೇಂದ್ರ ಎಲ್​. ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾಗಿ ಆಯ್ಕೆಯಾದ ಅಧ್ಯಕ್ಷ ಗಗನ್​ ಕೆ. ಸುವರ್ಣ, ಉಪಾಧ್ಯಕ್ಷ ಧೀರಜ್​, ಕಾರ್ಯದರ್ಶಿ ಖುಷಿ, ಉಪಕಾರ್ಯದರ್ಶಿ ಉಜ್ವಲ ನಾಯಕ ಇವರನ್ನು ಹಾಗೂ ಎಲ್ಲ ತರಗತಿಯ ವಿದ್ಯಾರ್ಥಿ ಪ್ರತಿನಿಧಿಗಳು, ವಿವಿಧ ಅಸೋಸಿಯೇಷನ್​ನ ಪ್ರತಿನಿಧಿಗಳಿಗೆ ಶ್ರೀಪಾದರು ಅನುಗ್ರಹಿಸಿದರು.

ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಲವಿಟ ಡಿಸೋಜ, ಗೌರಿ ಶೆಣೈ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ ಜಿಗಳೂರು ಇವರ ಕೃತಿಗಳನ್ನು ಶ್ರೀಪಾದರು ಬಿಡುಗಡೆ ಮಾಡಿದರು.

ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಡಾ. ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿದರು. ವಿನಾಯಕ ಪೈ ವಂದಿಸಿದರು. ವಿದ್ಯಾರ್ಥಿನಿ ರಾನಿಯಾ ಕಾರ್ಯಕ್ರಮ ನಿರೂಪಿಸಿದರು.