ಜಿಲ್ಲೆ

ಸುರತ್ಕಲ್ ಲೈಟ್‌ಹೌಸ್ ಬಳಿ ಸಮುದ್ರಕ್ಕೆ ಇಳಿದ ವಿದ್ಯಾರ್ಥಿ ನೀರುಪಾಲು

Dakshina Kannada

ಮಂಗಳೂರು: ಸುರತ್ಕಲ್ ಲೈಟ್‌ಹೌಸ್ ಸಮೀಪ ಗೆಳೆಯನ ಜತೆ ಸಮುದ್ರಕ್ಕೆ ಇಳಿದ ವಿದ್ಯಾರ್ಥಿ ನೀರಿನ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾದ ಘಟನೆ ಶನಿವಾರ ಸಾಯಂಕಾಲ ನಡೆದಿದೆ. ಹೊಸ ವರ್ಷ ಸ್ವಾಗತಿಸುವ ಸಂಭ್ರಮದಲ್ಲಿ ಸಮುದ್ರಪಾಲಾದ ಯುವಕನ ಮನೆಯಲ್ಲಿ ಸೂತಕ ಆವರಿಸಿದೆ.

ಮಂಗಳೂರು ಕೆಪಿಟಿ ಡಿಪ್ಲೊಮಾ ಅಂತಿಮ ವರ್ಷದ ಸತ್ಯಂ(18) ಸಮುದ್ರದಲ್ಲಿ ಕಣ್ಮರೆಯಾದ ವಿದ್ಯಾರ್ಥಿ. ಮೂಲತಃ ಬಿಹಾರ ನಿವಾಸಿ ಸುರೇಶ್ ಪ್ರಸಾದ್ ಯಾದವ್ ಅವರ ಪುತ್ರ. ಪ್ರಸ್ತುತ ಇವರ ಕುಟುಂಬ ಸುರತ್ಕಲ್ ಕಾನದಲ್ಲಿ ವಾಸವಿದ್ದಾರೆ. ಸತ್ಯಂ ಅವರು ತನ್ನ ಸಹಪಾಠಿ ಮಿತ್ರ ಪ್ರಭಾಕರನ್(19) ಜತೆ ಸಮುದ್ರದಲ್ಲಿ ನೀರಾಟ ಆಡುತ್ತಿದ್ದಾಗ ಅನಾಹುತ ಸಂಭವಿಸಿದೆ. ಪ್ರಭಾಕರನ್ ತಂದೆ ಎಂಆರ್‌ಪಿಎಲ್ ನಲ್ಲಿ ಉದ್ಯೋಗದಲ್ಲಿದ್ದು, ಎಂಆರ್‌ಪಿಎಲ್ ಕ್ವಾರ್ಟಸ್‌ನಲ್ಲಿ ವಾಸವಾಗಿದ್ದಾರೆ.

ಸತ್ಯಂ ಸಮುದ್ರದ ನೀರಿನ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಕಣ್ಮರೆಯಾದ ಸಂದರ್ಭ ಪ್ರಭಾಕರನ್ ಈಜಿ ಅಪಾಯದಿಂದ ಪಾರಾಗಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.