ಕೂಡಲಸಂಗಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.10 ರಂದು ವಿಧಾನಸಭಾ ಅಧಿವೇಶನದಲ್ಲಿ ಮೀಸಲಾತಿ ಕೊಡಲ್ಲ ಎಂದು ಹೇಳಿಕೆ ಕೊಟ್ಟಿದ್ದರಿಂದಾಗಿ ರಾಜ್ಯದ ಎಲ್ಲ ಹಳ್ಳಿ, ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಸಮಾಜ ಬಾಂಧವರಿಗೆ ಸರ್ಕಾರದ ಅನ್ಯಾಯ, ದೌರ್ಜನ್ಯ ತಿಳಿಸಿ ಜನರ ಸಲಹೆ ಪಡೆದು ದೃಢ ನಿರ್ಧಾರ ಕೈಗೊಂಡು ಪ್ರತಿಜ್ಞಾ ಅಭಿಯಾನ ಕ್ರಾಂತಿ ಮಾಡಲಾಗುವುದೆಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಮಂಗಳವಾರ ನಡೆದ ಪಂಚಮಸಾಲಿ ಪ್ರತಿಜ್ಞಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೀಸಲಾತಿ ಪಡೆಯುವವರೆಗೂ ಹೋರಾಟ ನಿಲ್ಲಲ್ಲ. ಈಗಾಗಲೇ 7 ಹಂತದಲ್ಲಿ ಹೋರಾಟ ಮಾಡಿದ್ದೇವೆ. ಇಂದು ಆರಂಭವಾದ ಈ ಅಭಿಯಾನ 8ನೇ ಹಂತದ ಹೋರಾಟವಾಗಿದೆ. ಮಾರಣಾಂತಿಕ ಹಲ್ಲೆಗೆ ಕಾರಣವಾದ ವ್ಯಕ್ತಿಗಳಿಗೆ ಅಸಹಕಾರ ಕೊಡುವುದು. ಮೀಸಲಾತಿಗೆ ಬೆಂಬಲ ಕೊಡುವ ವ್ಯಕ್ತಿಗಳಿಗೆ ಸಹಕರಿಸಲು ಈ ಹೋರಾಟದಲ್ಲಿ ಪ್ರತಿಜ್ಞೆ ಮಾಡಲಾಗುವುದು ಎಂದರು.
ಸರ್ಕಾರ ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಮಾತ್ರ ಘೋಷಿಸಿದೆ. ಬಸವಣ್ಣನ ತತ್ವ, ವಿಚಾರಗಳನ್ನು ಭಿತ್ತರಿಸುವ ಯೋಜನೆಯನ್ನು ಸರ್ಕಾರ ಮಾಡಬೇಕು ಎಂದರು.
ಮೀಸಲಾತಿ ಹೋರಾಟದಲ್ಲಿ ಪೊಲೀಸರ ಮಾರಣಾಂತಿಕ ಹಲ್ಲೆಗೊಳಗಾದ ಬಸವನ ಬಾಗೇವಾಡಿ ತಾಲೂಕಿನ ಹಂಗರಗಿ ಗ್ರಾಮದ ಉಮೇಶ ಇಂಗಳೇಶ್ವರ ಅವರಿಗೆ ಪಂಚಮಸಾಲಿ ವೀರ ಎಂಬ ಬಸವ ರಕ್ಷೆಯನ್ನು ಶ್ರೀಗಳು ನೀಡಿದರು.
ಮುಖಂಡರಾದ ಶಂಕ್ರಪ್ಪ ನೇಗಲಿ, ಬಸವರಾಜ ಗೌಡರ, ಶ್ರೀಶೈಲ ಬೋಕಾಣಿ, ಮಹಾಂತೇಶ ಮದರಿ, ವಿ.ಎಚ್. ಬಿರಾದಾರ, ಅಯ್ಯಪ್ಪ ಅಂಗಡಿ, ಶೇಖಪ್ಪ ದೇಶಿ ಇತರರಿದ್ದರು.