ಜಿಲ್ಲೆ

ಮೀಸಲಾತಿ ಸಿಗುವವರೆಗೂ ನಿಲ್ಲದು ಹೋರಾಟ

ಬಸವರಾಜ ವೀರಪ್ಪ ಗರಗ

ನರಗುಂದ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ. ಸರ್ಕಾರವನ್ನು ನಿರಂತರ ಎಚ್ಚರಿಸುವ ಕೆಲಸ ಪಂಚಮಸಾಲಿ-ಲಿಂಗಾಯತ ಸಮಾಜ ಬಾಂಧವರಿಂದ ನಡೆಯಲಿದೆ. ಸರ್ಕಾರ ಪಂಚಮಸಾಲಿ ಸಮಾಜದವರ ಬೇಡಿಕೆ ಈಡೇರಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ವಿಧಾನಮಂಡಲ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಸಿ.ಸಿ. ಪಾಟೀಲ ಸರ್ಕಾರವನ್ನು ಆಗ್ರಹಿಸಿದರು.

ತಾಲೂಕಿನ ಹುಣಸೀಕಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಎರಡು ದಿನದ ಅಧಿವೇಶನದ ಹೊರಭಾಗದಲ್ಲಿ 2ಎ ಮೀಸಲಾತಿಗಾಗಿ ಲಿಂಗಾಯತ-ಪಂಚಮಸಾಲಿ ಸಮಾಜದವರು ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರೆ ಸರ್ಕಾರ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ನಿಯಮಗಳನ್ನು ಗಾಳಿಗೆ ತೂರಿ ಪೊಲೀಸರಿಂದ ಲಾಠಿ ಪ್ರಹಾರ ಮತ್ತು ಹಲ್ಲೆ ಮಾಡಿಸಿದ್ದು ನಿಯಮಬಾಹಿರವಾಗಿದೆ ಎಂದು ದೂರಿದರು.

ಎಡಿಜಿಪಿ ಸ್ಥಳದಲ್ಲೇ ಇದ್ದು ಲಾಠಿ ಪ್ರಹಾರ ಮಾಡಿದ್ದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುತ್ತಿದೆ. ಸರ್ಕಾರ ಲಾಠಿ ಪ್ರಹಾರಕ್ಕೆ ಪೊಲೀಸರಿಗೆ ಕುಮ್ಮಕ್ಕು ನೀಡಿ ಇಂಥ ಅವಘಡ ಮಾಡಿದೆ ಎಂದು ಶಾಸಕರು ಟೀಕಿಸಿದರು.

ಪಂಚಮಸಾಲಿ ಮೀಸಲಾತಿಗಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈ ಹಿಂದೆ ಕೂಡಲಸಂಗಮದಿಂದ 708 ಕಿಮೀ ಪಾದಯಾತ್ರೆ ನಡೆಸಲಾಗಿದೆ. ಇದೀಗ ಕೈ ಸರ್ಕಾರ ಮೀಸಲಾತಿ ಬೇಡಿಕೆ ಅಸಂವಿಧಾನಿಕ ಎಂದು ಹೇಳುತ್ತಿದೆ. ಆದರೆ, ಕಾಂಗ್ರೆಸ್ ಸರ್ಕಾರ ಈ ಹಿಂದೆ ಮೀಸಲಾತಿಗಾಗಿ ಹೋರಾಟ ನಡೆಸಿರುವುದನ್ನು ಸ್ವತಃ ಆ ಪಕ್ಷದ ಮುಖಂಡರೇ ಮರೆತಿದ್ದಾರೆ. ರಾಣಿ ಚನ್ನಮ್ಮನ ವಂಶಸ್ಥರಾದ ಲಿಂಗಾಯತರ ಮೇಲೆ ದೌರ್ಜನ್ಯ ಮಾಡಿದವರಿಗೆ ಖಂಡಿತ ಶಾಪ ತಟ್ಟುತ್ತದೆ ಎಂದರು.

ಮಲ್ಲಪ್ಪ ಮೇಟಿ. ಚಂದ್ರು ದಂಡಿನ, ಬಿ.ಬಿ. ಐನಾಪೂರ, ಬಸನಗೌಡ ಪಾಟೀಲ, ಆರ್.ಬಿ. ಅಳಗವಾಡಿ ಇನ್ನಿತರರು ಉಪಸ್ಥಿತರಿದ್ದರು.