ನಾಪೋಕ್ಲು: ನಮ್ಮ ಭೂಮಿ ನಮ್ಮ ಹಕ್ಕು..ಮಣ್ಣಿಗಾಗಿ ನಮ್ಮ ಹೋರಾಟ ಎಂಬ ಘೋಷಣೆಯೊಂದಿಗೆ ಸಮೀಪದ ಹೊದ್ದೂರು ಗ್ರಾಮದ ಪೆಠಗೋಳಿಯಲ್ಲಿ ನಡೆಯುತ್ತಿರುವ ನಿವೇಶನರಹಿತರ ಹೋರಾಟ ಶನಿವಾರ ಎಂಟನೇ ದಿನಕ್ಕೆ ಕಾಲಿರಿಸಿದೆ.
ಹೊದ್ದೂರು ಗ್ರಾಮದ ಪೆಠಗೋಳಿ ಎಂಬಲ್ಲಿ ಕಳೆದ ಏಳು ದಿನಗಳಿಂದ ಚಳಿ, ಮಳೆ, ಗಾಳಿಗೆ ಲೆಕ್ಕಿಸದೆ ಟೆಂಟ್‌ನಲ್ಲಿ ವಾಸವಾಗಿದ್ದು ಸರ್ಕಾರಿ ಜಾಗದಲ್ಲಿನ ಅಕ್ರಮ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ನಿವೇಶನ ಕೊಡಿಸುವಂತೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಕುಟುಂಬ ಹಾಗೂ ಹೋರಾಟ ಸಮಿತಿಯ ಪದಾಧಿಕಾರಿಗಳು ಧರಣಿ ನಡೆಸುತ್ತಿದ್ದಾರೆ.
ಹೊದ್ದೂರು ಗ್ರಾಮದಲ್ಲಿ 800ಕ್ಕೂ ಅಧಿಕ ನಿರಾಶ್ರಿತ ಬಡ ಕುಟುಂಬಗಳಿಗೆ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಇನ್ನಿತರ ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ಸರ್ಕಾರಿ ಕಂದಾಯ ಭೂಮಿಯನ್ನು ಭೂ ಮಾಲೀಕರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು ಇದುವರೆಗೂ ಬಡವರಿಗೆ ನಿವೇಶನಗಳನ್ನು ಸರ್ಕಾರ ನೀಡಲು ಮುಂದಾಗಿಲ್ಲ. ಹೊದ್ದೂರು ಗ್ರಾಮದ ಸರ್ವೇ ನಂ. 53/10, 49/3 ಮತ್ತು 88/4 ರಲ್ಲಿ ನಿವೇಶನ ಕಲ್ಪಿಸಿ ಕೊಡುವಂತೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾ ಕಾರ್ಯದರ್ಶಿಯೂ ಆದ ಹೊದ್ದೂರು ಪಂಚಾಯಿತಿ ಸದಸ್ಯ ಕೆ.ಮೊಣ್ಣಪ್ಪ ಒತ್ತಾಯಿಸಿದರು.
ಹೊದ್ದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕುಸುಮಾವತಿ, ಎಚ್.ಎಸ್.ಭೋಜ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಕಿರಣ್, ಜಗದೀಶ್, ಮಹಮ್ಮದ್, ಮಾದೇಶ, ನಿವೇಶನ ಸಮಿತಿ ಪದಾಧಿಕಾರಿ ಸತೀಶ, ಲೋಕೇಶ , ಮೋಹನ್, ಸುಜಾತಾ, ಆನಂದ, ಮಂಜುಳಾ, ಜೀವನ್, ಸೌಮ್ಯಾ ಇನ್ನಿತರರು ಪಾಲ್ಗೊಂಡಿದ್ದರು.
ಡಿಸಿ ಸಮಸ್ಯೆ ಬಗೆಹರಿಸಲಿ: ತೆಕ್ಕಡೆ ಕುಟುಂಬಸ್ಥರ ಪರವಾಗಿ ಮಾತನಾಡಿದ ತೆಕ್ಕಡೆ ಮಹೇಶ್, 50 ವರ್ಷಕ್ಕೂ ಹಿಂದಿನಿಂದ ಈ ಆಸ್ತಿಯನ್ನು ಅನುಭವಿಸುತ್ತಿದ್ದೇವೆ. ಕುಟುಂಬದ 500 ಜನರು ತೋಟ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೆ ಅಕ್ರಮ ಪ್ರವೇಶ ಮಾಡಿ ಜಾಗ ನಮ್ಮದು ಎಂದು ನಿವೇಶನ ರಹಿತರು ಹೋರಾಟ ನಡೆಸುತ್ತಿದ್ದಾರೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗುರುವಾರ ಕಂದಾಯ ಇಲಾಖೆ ವತಿಯಿಂದ ಸರ್ವೇ ಮಾಡಲಾಗಿದ್ದು ದಾಖಲೆ ದೊರಕಬೇಕಾಗಿದೆ. ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಿ ಕೊಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭಅವರ ತಂದೆ ಸೋಮಣ್ಣ, ಸಹೋದರ ಪೂರ್ಣೇಶ್ ಇದ್ದರು.