ಸೋಮವಾರಪೇಟೆ: ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಸಭೆ ಜಿಲ್ಲಾಧ್ಯಕ್ಷ ಕೆ.ಎನ್.ದೀಪಕ್ ಅಧ್ಯಕ್ಷತೆಯಲ್ಲಿ ಪತ್ರಿಕಾಭವನದಲ್ಲಿ ಇತ್ತೀಚೆಗೆ ನಡೆಯಿತು.
ಜಿಲ್ಲಾ ಗೌರವಾಧ್ಯಕ್ಷ ನಾಗೇಗೌಡ ಅವರು ಮಾತನಾಡಿ, ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದ ಕರವೇ ರಾಜ್ಯದಲ್ಲಿ ನಾಡು-ನುಡಿಗಾಗಿ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದು, ಸಂಘಟನೆಯನ್ನು ಬಲಪಡಿಸಲು ಕಾರ್ಯಕರ್ತರು ತಮ್ಮ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಜಿಲ್ಲಾ ಅಧ್ಯಕ್ಷ ಕೆ.ಎನ್.ದೀಪಕ್ ಮಾತನಾಡಿ, ಭ್ರಷ್ಟಾಚಾರ, ಲಂಚಗುಳಿತನದಿಂದ ಸಮಾಜದ ಸ್ವಾಸ್ಥೃ ಹಾಳಾಗುತ್ತಿದೆ. ಕರವೇ ಕಾರ್ಯಕರ್ತರು ಅಂತಹವರ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಇದೇ ಸಂದರ್ಭ ಸಭೆಯಲ್ಲಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿ ಇಂಚರಾ ಗೌಡ, ಕಾರ್ಯದರ್ಶಿಯಾಗಿ ಶ್ರುತಿ ಗಿರೀಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶಶಿಕಲಾ, ಜಿಲ್ಲಾ ಸಂಚಾಲಕಿಯಾಗಿ ರೇಣುಕಾ ಕೃಷ್ಣ, ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಭಾಗ್ಯ ಅವರನ್ನು ಆಯ್ಕೆ ಮಾಡಲಾಯಿತು.
ಯುವ ಘಟಕದ ತಾಲೂಕು ಅಧ್ಯಕ್ಷರಾಗಿ ವಸಂತ್, ಸಂಘಟನಾ ಕಾರ್ಯದರ್ಶಿಯಾಗಿ ವೆಂಕಿ ಹಾನಗಲ್ ಆಯ್ಕೆಯಾದರು. ವೇದಿಕೆಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಂಧ್ಯಾ ಗಣೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಯಡೂರು, ಜಿಲ್ಲಾ ಉಪಾಧ್ಯಕ್ಷ ಚಂದ್ರು, ಕುಶಾಲನಗರ ತಾಲೂಕು ಅಧ್ಯಕ್ಷ ಅಣ್ಣಯ್ಯ, ನಗರಾಧ್ಯಕ್ಷ ಮಂಜುನಾಥ್ ಇದ್ದರು.
ಹತ್ತಾರು ವರ್ಷಗಳಿಂದ ಕನ್ನಡ ಪರ ಹೋರಾಟದಲ್ಲಿ ಭಾಗಿಯಾಗಿದ್ದ ಬಿ.ಎ.ನಾಗೇಗೌಡ, ರವೀಶ್ ಕಲ್ಕಂದೂರು, ಅಬ್ಬಾಸ್ ಬಜೆಗುಂಡಿ, ವೇದಕುಮಾರ್ ಕೊಡ್ಲಿಪೇಟೆ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.