ಶಿರಸಿ: ಗ್ರಾಮ ಲೆಕ್ಕಾಧಿಕಾರಿಗಳು ಮೂರು ದಿನಗಳಿಂದ ಮುಷ್ಕರ ಕುಳಿತಿರುವುದು ಸಾರ್ವಜನಿಕರಿಗಿಂತ ವಿದ್ಯಾರ್ಥಿಗಳ ಪಾಲಕರಿಗೆ ಅತಿ ಹೆಚ್ಚಿನ ಆತಂಕ ಮೂಡಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಜಿ ತುಂಬುವ ದಿನ ಸಮೀಪಿಸುತ್ತಿರುವುದರಿಂದ ಅರ್ಜಿಯೊಂದಿಗೆ ಸಲ್ಲಿಸಬೇಕಾದ ಕಾಗದಪತ್ರಗಳು ಪೂರ್ಣಗೊಳ್ಳದೇ ಆತಂಕಕ್ಕೆ ಒಳಗಾಗಿದ್ದಾರೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ವಾರ್ಷಿಕ ಪರೀಕ್ಷೆಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗೂ ಅಣಿಗೊಳಿಸಲಾಗುತ್ತಿದೆ. ಕಾಲೇಜಿನವರೇ ಸ್ಪರ್ಧಾತ್ಮಕ ಪರೀಕ್ಷೆಗಳ ಮಾದರಿ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು ಪದೇ ಪದೆ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ಸಕಲ ರೀತಿಯಲ್ಲಿಯೂ ಸಜ್ಜುಗೊಳಿಸಿದ್ದಾರೆ. ಏಪ್ರಿಲ್ನಲ್ಲಿ ನಡೆಯಲಿರುವ ಸಿಇಟಿ ಪರೀಕ್ಷೆಗೆ ಈಗಲೇ ಅರ್ಜಿ ಸಲ್ಲಿಸಬೇಕಾಗಿದೆ. ಈ ಅರ್ಜಿಯೊಂದಿಗೆ ಎನ್ಸಿಎಲ್ಸಿ (ಮೇಲುಸ್ತರಕ್ಕೆ ಒಳಪಟ್ಟಿಲ್ಲ ಎಂಬ ದಾಖಲೆ), ಜಾತಿ ಪ್ರಮಾಣಪತ್ರ ಲಗತ್ತಿಸಬೇಕಿದ್ದು, ಗ್ರಾಮ ಲೆಕ್ಕಿಗರ ಮುಷ್ಕರದಿಂದ ಈ ಪ್ರಮಾಣ ಪತ್ರ ದೊರೆಯುವುದು ಕಷ್ಟವಾಗಿದೆ.
ಸಮಸ್ಯೆ ಏನು?:
ಸಿಇಟಿ ಪರೀಕ್ಷೆ ಅರ್ಜಿ ಭರ್ತಿ ಮಾಡಲು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರು ಮತ್ತು ಗ್ರಾಮೀಣ ಶಾಲೆಗಳಲ್ಲಿ ಓದಿದವರು ವೆಬ್ಸೈಟ್ನಲ್ಲಿ ಎನ್ಸಿಎಲ್ಸಿ ಹಾಗೂ ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಸರ್ಟಿಫಿಕೇಟ್ ಸಲ್ಲಿಸಬೇಕಾಗುತ್ತದೆ. ಈ ದಾಖಲೆ ಪಡೆಯಲು ವಿದ್ಯಾರ್ಥಿ ಇದುವರೆಗೂ ಕಲಿತ ಶಾಲೆಗಳಿಂದ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ದಾಖಲೆ ಹಾಗೂ ಅಧ್ಯಯನ ಮಾಡಿರುವ ಬಗ್ಗೆ ದಾಖಲೆಗಳನ್ನು ಪ್ರತ್ಯೇಕವಾಗಿ ಪಡೆದು, ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಅನುಮೋದನೆ ಮಾಡಿಸಬೇಕಾಗುತ್ತದೆ. ಈ ಅನುಮೋದನೆಗೊಂಡ ದಾಖಲೆಗಳನ್ನು ಗ್ರಾಮ ಒನ್ ಕೇಂದ್ರಕ್ಕೆ ಸಲ್ಲಿಸಿ ಎನ್ಸಿಎಲ್ಸಿ ಸರ್ಟಿಫಿಕೇಟ್ಗೆ ಅರ್ಜಿ ಸಲ್ಲಿಸಬೇಕು. ಬಳಿಕ ಗ್ರಾಮ ಲೆಕ್ಕಿಗರು ಆನ್ಲೈನ್ ಮೂಲಕವೇ ಈ ದಾಖಲೆ ಪರಿಶೀಲಿಸಿ ಒಂದು ವಾರದ ಒಳಗೆ ಒಪ್ಪಿಗೆ ನೀಡಬೇಕಾಗಿದೆ. ಎನ್ಸಿಎಲ್ಸಿ ಸಿಕ್ಕ ಬಳಿಕ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ವೆಬ್ಸೈಟ್ಗೆ ಈ ಸರ್ಟಿಫಿಕೇಟ್ ನೋಂದಣಿ ಸಂಖ್ಯೆ ದಾಖಲಿಸಬೇಕಾಗುತ್ತದೆ.
ಈಗಾಗಲೇ ಪಾಲಕರೆಲ್ಲ ತಮ್ಮ ಮಕ್ಕಳು ಕಲಿತ ಶಾಲೆಗಳಿಗೆ ಅಡ್ಡಾಡಿ ಅವರ ವ್ಯಾಸಂಗ ಪತ್ರ, ಕನ್ನಡ ಮಾಧ್ಯಮದ ಪತ್ರ ಪಡೆದು ಎನ್ಸಿಎಲ್ಸಿಗಾಗಿ ಗ್ರಾಮ ಒನ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಂತದಲ್ಲಿ ಗ್ರಾಮ ಲೆಕ್ಕಿಗರ ಧರಣಿಯಿಂದಾಗಿ ಸರ್ಟಿಫಿಕೇಟ್ ಸಿದ್ಧತೆ ಕಾರ್ಯ ಅಷ್ಟಕ್ಕೇ ನಿಂತಿದೆ. ಸಿಇಟಿಗೆ ಅರ್ಜಿ ಸಲ್ಲಿಸಲು ಈ ತಿಂಗಳ 18 ಕೊನೇ ದಿನವಾಗಿದ್ದು, ಅಷ್ಟರೊಳಗೆ ಈ ಪ್ರಮಾಣಪತ್ರ ಸಿಗದಿದ್ದರೆ ಹೇಗೆಂಬ ಆತಂಕ ಪಾಲಕರಲ್ಲಿ ಮನೆ ಮಾಡಿದೆ. ಇದು ಉತ್ತರ ಕನ್ನಡ ಮಾತ್ರವಲ್ಲ, ಎಲ್ಲ ಜಿಲ್ಲೆಗಳಲ್ಲಿ ತಲೆದೋರಿರುವ ಸಮಸ್ಯೆ.
ಮುಂದೇನು?:
ಹಲವು ಪಾಲಕರು ನೇರವಾಗಿ ಜಿಲ್ಲಾಧಿಕಾರಿ, ತಹಸೀಲ್ದಾರರನ್ನು ಸಂರ್ಪಸಿ ಈ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ಜಿಲ್ಲಾಡಳಿತದಿಂದ ತಹಸೀಲ್ದಾರರ ಜತೆ ವಿಡಿಯೋ ಕಾನ್ಪರೆನ್ಸ್ ನಡೆಸಿ ಚರ್ಚೆ ನಡೆಸಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳು ಲಭ್ಯರಾಗದ ಹಿನ್ನೆಲೆಯಲ್ಲಿ ಕಂದಾಯ ನಿರೀಕ್ಷಕರ ಮೂಲಕ ಆನ್ಲೈನ್ ವೆರಿಫಿಕೇಶನ್ ಮಾಡಿ, ಸರ್ಟಿಫಿಕೇಟ್ ನೀಡಲು ಯತ್ನಿಸಲಾಗುತ್ತಿದೆ.
ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಆರ್ಐಗಳ ಸಂಖ್ಯೆ 12 ಮಾತ್ರ ಇವೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸಂಖ್ಯೆ ಜಿಲ್ಲೆಯಲ್ಲಿ 12 ಸಾವಿರದಷ್ಟಿದ್ದು, ಅವರ ಜಾತಿ ಪ್ರಮಾಣಪತ್ರ, ಎನ್ಸಿಎಲ್ಸಿ ಸೇರಿ ವಿವಿಧ ಪ್ರಮಾಣಪತ್ರಗಳ ಆನ್ಲೈನ್ ಪರಿಶೀಲನೆ, ಅನುಮತಿ ನೀಡುವಿಕೆ ಎಲ್ಲವೂ ಕೇವಲ 12 ಜನರಿಂದ ಸಾಧ್ಯವಾಗದ ಮಾತು. ಗ್ರಾಮ ಲೆಕ್ಕಿಗರ ಪ್ರತಿಭಟನೆ ಆದಷ್ಟು ಶೀಘ್ರವಾಗಿ ಇತ್ಯರ್ಥವಾಗಲಿ ಎಂದು ಪಾಲಕರು ಈಗ ಹಾರೈಸುತ್ತಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿಭಟನೆ ನಡೆಸಿದ್ದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿರುವ ಬಗ್ಗೆ ಪಾಲಕರೂ ನಮಗೆ ಕರೆ ಮಾಡುತ್ತಿದ್ದಾರೆ. ಸಮಸ್ಯೆ ಬಗೆಹರಿಸಲು ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಜಿಲ್ಲಾಡಳಿತದ ಜತೆ ಚರ್ಚೆ ನಡೆಸುತ್ತಿದ್ದೇವೆ. ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ. ಶ್ರೀಧರ ಮುಂದಲಮನಿ ತಹಸೀಲ್ದಾರ್, ಶಿರಸಿ