ನರಗುಂದ: ಮಹದಾಯಿ, ಕಳಸಾ- ಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವೇದಿಕೆಯಲ್ಲಿ ಸೋಮವಾರ ಧರಣಿ ನಿರತರು ಅಸ್ವಸ್ಥಗೊಂಡರು. ಸ್ಥಳದಲ್ಲೇ ಧರಣಿ ನಿರತರಿಗೆ ವೈದ್ಯರು ತಪಾಸಣೆ ನಡೆಸಿ, ಚಿಕಿತ್ಸೆ ನೀಡಿದರು.
ಸಂಸದ ಗದ್ದಿಗೌಡರ ಭೇಟಿ: ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡ್ರ ವೇದಿಕೆಗೆ ಭೇಟಿ ನೀಡಿದರು. ಕಳಸಾ, ಬಂಡೂರಿ ಹೋರಾಟದ ವಿಷಯ ತಿಳಿದಿದೆ. ಇದಕ್ಕೆ ಕೇಂದ್ರ ಸರ್ಕಾರ ಹಾಗೂ ಸಚಿವ ಪ್ರಲ್ಹಾದ ಜೋಶಿ ಅವರು ಪ್ರಯತ್ನಿಸುತ್ತಿದ್ದಾರೆ. ಉಪವಾಸ ಸತ್ಯಾಗ್ರಹ ಕೈ ಬಿಡುವಂತೆ ಮನವಿ ಮಾಡಿದರು.
ಪ್ರಲ್ಹಾದ ಜೋಶಿ ಅವರು ವೇದಿಕೆಗೆ ಭೇಟಿ ನೀಡಬೇಕು. ಸ್ಪಷ್ಟ ನಿಲುವು ತಿಳಿಸಬೇಕು ಎಂದು ಹೋರಾಟಗಾರರು ಆಗ್ರಹಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಗದ್ದಿಗೌಡರ, ಜೋಶಿ ಅವರು ಜಮ್ಮು ಕಾಶ್ಮೀರದಲ್ಲಿದ್ದಾರೆ. ಅ.27ರ ನಂತರ ಇಲ್ಲಿಗೆ ಬರುವಂತೆ ಈಗಾಗಲೇ ಮಾತನಾಡಿದ್ದೇನೆ ಎಂದರು. ಅ.27ರೊಳಗೆ ಸಚಿವ ಜೋಶಿ ಅವರು ಭೇಟಿ ನೀಡಬೇಕು. ಇಲ್ಲದಿದ್ದರೆ 27ರಿಂದ ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸುವ ನಿರ್ಧಾರಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು. ನಂತರ ಸಂಸದ ಗದ್ದಿಗೌಡ್ರ ಅವರು ಧರಣಿ ನಿರತರಿಗೆ ಎಳೆ ನೀರು ಕುಡಿಸುವುದರ ಮೂಲಕ ಉಪವಾಸ ಸತ್ಯಾಗ್ರಹ ಅಂತ್ಯಗೊಂಡಿತು.
ಜಿಲ್ಲಾಧಿಕಾರಿ ಗೋವಿಂದ ರಡ್ಡಿ, ಎಸ್ಪಿ ಬಿ.ಎಸ್. ನೇಮಗೌಡ, ತಹಸೀಲ್ದಾರ್ ಶ್ರೀಶೈಲ ತಳವಾರ, ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ, ಶಿವಾನಂದ ಮುತವಾಡ, ಶಂಕರಪ್ಪ ಅಂಬಲಿ, ಬಸವರಾಜ ಸಾಬಳೆ, ವಿಠ್ಠಲ ಜಾಧವ, ಶರಣಯ್ಯ ಮಠಪತಿ, ದೇವೇಂದ್ರ ಗುಡಿಸಾಗರ, ಮಲ್ಲಪ್ಪ ಗಾಣಿಗೇರ, ಶಂಕರಗೌಡ ಪಾಟೀಲ, ಚನ್ನು ನಂದಿ, ಎಸ್.ಎಸ್. ಪಾಟೀಲ, ಶಿವಾನಂದ ಹಳಕಟ್ಟಿ. ಎಂ.ಆರ್. ರಂಗನಾಥ್, ವಿ.ಎಸ್. ಸೊಪ್ಪಿನ, ನಭಿಸಾಬ್ ಕಿಲ್ಲೇದಾರ, ಎಸ್.ಎನ್. ಕುಂಚುರ, ರಘುನಾಥರೆಡ್ಡಿ ನಡುವಿನಮನಿ ಇದ್ದರು.